ಹೊಸದಿಗಂತ ವರದಿ ಹಾಸನ:
ಜಿಲ್ಲೆಯ ವಿವಿಧೆಡೆ ತಡರಾತ್ರಿ ಸುರಿದ ಭಾರಿ ಮಳೆಗೆ ಕಾಫಿ ಬೆಳೆ ಸೇರಿದಂತೆ, ಮನೆಯ ಗೃಹಪಯೋಗಿ ವಸ್ತುಗಳು ಹಾನಿಯಾಗಿವೆ.
ಶನಿವಾರ ರಾತ್ರಿ ಜಿಲ್ಲೆಯಲ್ಲಿ ವಿವಿಧೆಡೆ ಭಾರಿ ಮಳೆ ಸುರಿದಿದ್ದು, ಇನ್ನೂ ಕೆಲವೆಡೆ ತುಂತುರು ಮಳೆಯಾಗಿದೆ. ಸಿಡಿಲು ಸಹಿತ ಭಾರಿ ಮಳೆಗೆ ಕಾಫಿ ಬೆಳೆ ಹಾನಿಯಾದರೆ, ಇನ್ನೊಂದೆಡೆ ಸಿಡಿಲು ಬಡಿತದಿಂದ ತೆಂಗಿನ ಮರ ಹೊತ್ತಿ ಉರಿದಿದೆ. ಮನೆಯ ಗೃಹ ಉಪಯೋಗಿ ಎಲೆಕ್ಟ್ರಿಕಲ್ ವಸ್ತುಗಳು, ವಿದ್ಯುತ್ ಟ್ರಾನ್ಸ್ಫಾರ್ಮ್‌ಗಳಿಗೆ ಹಾನಿ ಸಂಭವಿಸಿವೆ.
ಆಲೂರು ತಾಲೂಕಿನಲ್ಲಿ ತಡರಾತ್ರಿ ವೇಳೆ ರಭಸವಾಗಿ ಬಡಿದ ಸಿಡಿಲಿಗೆ ಪಟ್ಟಣದ ಐಟಿಐ ಕಾಲೇಜಿನ ಆವರಣದಲ್ಲಿದ್ದ ತೆಂಗಿನ ಮರ ಹೊತ್ತಿ ಉರಿದಿದೆ. ಸಿಡಿಲ ಹೊಡೆತದಿಂದ ಪಟ್ಟಣದ ಹಲವು ಮನೆಯ ಟಿವಿ, ಫ್ರಿಡ್ಜ್, ಇತರೆ ಎಲೆಕ್ಟ್ರಿಕಲ್ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲಿಗೆ ಹೊಡೆತಕ್ಕೆ ವಿದ್ಯುತ್ ತಂತಿ ತುಂಡಾಗಿ ಕೆಲ ಹೊತ್ತು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಂತರ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಿಂದಿಸಿದ್ದಾರೆ.
ಮಳೆಯಿಂದಾಗಿ ಕಾಫಿ ಬೆಳೆ ಹಾನಿ
ಸಕಲೇಶಪುರ ತಾಲ್ಲೂಕಿನಲ್ಲಿಯು ಸಹ ವಿವಿಧೆಡೆ ರಾತ್ರಿ ಮಳೆ ಸುರಿದಿದೆ. ಸುರಿದ ಭಾರಿ ಮಳೆಗೆ ಕಾಫಿ ಬೆಳೆ ಉದುರಿದೆ. ಬರಗಾಲದ ನಡುವೆಯೂ ಕಾಫಿ ಬೆಳೆಗೆ ನೀರು ಹಾಯಿಸಿ ಕಾಫಿ ಬೆಳೆದಿದ್ದರು. ಶನಿವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಕಾಫಿ ಬೆಳೆ ಮಣ್ಣುಪಾಲಾಗಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.