ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ನಿನ್ನೆ ರಾತ್ರಿ ಇಡೀ ಹಲವಡೆ ಭಾರೀ ಮಳೆಯಾಗಿದ್ದು, ಇದರಿಂದ ರಸ್ತೆ, ಮನೆಗಳಿಗೆ ನುಗ್ಗಿದ ನೀರು ಒಂದೇ ದಿನಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಗಾಳಿ ಮಳೆಗೆ ಮರಗಳು ರಸ್ತೆಗುರುಳಿದ್ದು, ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.
ಕಳೆದ 24 ಗಂಟೆಯಲ್ಲಿ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 7.8ಸೆಂ.ಮೀ, ಹೊರಮಾವು 7 ಸೆಂ.ಮೀ, ವಿದ್ಯಾಪೀಠ 6.3ಸೆಂ.ಮೀ, ಹಂಪಿನಗರ 6.2ಸೆಂ.ಮೀ, ಕೊಡಿಗೆಹಳ್ಳಿ 6ಸೆಂ.ಮೀ, ಹೇರೋಹಳ್ಳಿ 5.9 ಸೆಂಮೀ, ದೊಡ್ಡನೆಕುಂದಿ 5.8ಸೆಂಮೀ, ಜಕ್ಕೂರು 5.6 ಸೆಂ.ಮೀ, ನಾಗೇನಹಳ್ಳಿ 5.3ಸೆಂ.ಮೀ, ಯಲಹಂಕಾ 5.3 ಸೆಂ.ಮೀ, RR ನಗರ 5.2 ಸೆಂ.ಮೀ ಮಳೆಯಾಗಿದೆ.
ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಬೀದಿಗಿಳಿದು ಮಳೆ ನೀರಲ್ಲೇ ನಿಂತು ರಸ್ತೆ ತಡೆದು ಬಿಬಿಎಂಪಿ ವಿರುದ್ಧ ಜನ ಪ್ರತಿಭಟನೆ ನಡೆಸಿದರು.
ಇನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಹೆಚ್ಚಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.