ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು , ಕುಮಟಾ ತಾಲೂಕಿನ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದಿದೆ.
ಗುಡ್ಡ ಕುಸಿತದಿಂದ ರಸ್ತೆಗೆ ಭಾರೀ ಗಾತ್ರದ ಬಂಡೆಗಲ್ಲು ಉರುಳಿ ಬಂದಿದೆ. ಪರಿಣಾಮ ಮೂರೂರು-ಹರಕಡೆ ನಡುವಿನ ರಸ್ತೆ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿತ್ತು. ಇದರಿಂದ ಕುಮಟಾ – ಶಿರಸಿ ಸಂಪರ್ಕ ಕಡಿತಗೊಂಡಿತ್ತು. ಕಳೆದ ಒಂದು ವರ್ಷದಿಂದ 766ಇ ಹೆದ್ದಾರಿ ಕಾಮಗಾರಿ ನಡೆಯುತಿತ್ತು.
ಆನೆಮಹಲ್ ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು ರಸ್ತೆಯೇ ಮಣ್ಣೀನಿಂದ ಆವೃತವಾಗಿದೆ. ಇದೇ ಮಾರ್ಗದ ಅಡ್ಡನಗುಡ್ಡ, ದೊಡ್ಡತಪ್ಲು ಬಳಿ ಕೂಡ ಅತಿಯಾದ ಮಳೆಯಿಂದ ಬರೆ ಕುಸಿದು ರಸ್ತೆ ಸಂಚಾರವೇ ಬಂದ್ ಆಗುವ ಭೀತಿ ಎದುರಾಗಿದೆ.
ಅತಿಯಾದ ವಾಹನದಟ್ಟಣೆಯಿಂದ ಭಾನುವಾರ ಕೆಲ ಕಾಲ ಸಂಚಾರದ ಮಾರ್ಗವನ್ನೇ ಬದಲಾಯಿಸಲಾಗಿತ್ತು. ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಮಳೆಯಿಂದ ಸಕಲೇಶಫುರ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಮಲ್ನಾಡ್ ಕೆಫೆ ಹೊಟೆಲ್ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.