ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಂಬ್ರದ ನೂತನ ಪಂಚಾಯತ್ ಕಟ್ಟಡದ ಬಳಿ ಇದ್ದ ಸುಮಾರು ೬೦ ವರ್ಷ ಹಳೆಯ ಬಾವಿ ಗುರುವಾರ ರಂದು ಸಂಜೆ ಸಂಪೂರ್ಣ ಕುಸಿತಗೊಂಡಿದೆ.
ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ತೋಡಿದ್ದ ಈ ಬಾವಿಯು ಒಂದು ಕಾಲದಲ್ಲಿ ಬಹಳಷ್ಟು ಮನೆಯವರು ಈ ಬಾವಿಯಿಂದ ನೀರು ಸೇದುತ್ತಿದ್ದರು. ಇತ್ತೀಚೆಗೆ ಒಳಮೊಗ್ರು ಗ್ರಾಮ ಪಂಚಾಯತ್ನ ನೂತನ ಕಟ್ಟಡ ನಿರ್ಮಾಣದ ವೇಳೆ ಈ ಬಾವಿಯನ್ನು ನವೀಕರಣಗೊಳಿಸಿದ್ದರು. ಇದೀಗ ಬಾವಿಯು ಸಂಪೂರ್ಣ ಭೂಮಿಯೊಳಗೆ ಕುಸಿತಗೊಂಡಿದೆ.
ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್., ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಅಪಾಯದಲ್ಲಿರುವ ವಿದ್ಯುತ್ ಕಂಬದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.