ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಈ ವಾರ ಎರಡು ವಿಭಿನ್ನ ಹವಾಮಾನ ಬದಲಾವಣೆಗಳನ್ನು ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ ನಿರಂತರ ಮಳೆ ಮತ್ತು ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ತಮಿಳುನಾಡು, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ವಾರದುದ್ದಕ್ಕೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈಗಾಗಲೇ ದಕ್ಷಿಣ ತಮಿಳುನಾಡಿನಲ್ಲಿ ತೀವ್ರ ಮಳೆಯಾಗುತ್ತಿದ್ದು, ಕೆಲವು ಜಿಲ್ಲೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.
ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ನವೆಂಬರ್ 18ರಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಪಿ. ಆದಿತ್ಯ ಸೆಂಥಿಲ್‌ಕುಮಾರ್ ತಿಳಿಸಿದ್ದಾರೆ. ಮಳೆಯ ತೀವ್ರತೆ ಹೆಚ್ಚಿದರೆ ಇನ್ನೂ ಹಲವು ಜಿಲ್ಲೆಗಳು ಇದೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದಲ್ಲದೆ, ಉತ್ತರ ಭಾರತದಲ್ಲಿ ತಾಪಮಾನ ತೀವ್ರವಾಗಿ ಕುಸಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ಚಳಿಗಾಲದ ಆರಂಭಿಕ ಮಂಜು ಮತ್ತು ತಂಪು ಗಾಳಿ ವರದಿಯಾಗಿದೆ. ದಕ್ಷಿಣದ ಮಳೆ ಮತ್ತು ಉತ್ತರದ ಚಳಿ—ಇವೆರಡೂ ಸೇರಿ ದೇಶವು ಹವಾಮಾನ ವೈಪರೀತ್ಯದ ನಡುವೆಯಿದೆ.

