ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಏಳು ದಿನ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಲವು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ, ಕೆಲವು ಕಡೆಗಳಲ್ಲಿ ಧಾರಾಕಾರ ಮಳೆಯನ್ನು ನಿರೀಕ್ಷಿಸಲಾಗಿದೆ. ಮಧ್ಯ ಮತ್ತು ಪೂರ್ವ ಭಾರತದ ಮೂಲಕ ಸಾಗುವ ಮುಂಗಾರು ಮಾರುತದಿಂದ ಮಹಾರಾಷ್ಟ್ರ-ಕರ್ನಾಟಕ ಕರಾವಳಿಯುದ್ದಕ್ಕೂ ಭಾರಿ ಮಳೆಯಾಗಲಿದೆ ಎಂದು ಐಎಮ್‌ಡಿ ಮಾಹಿತಿ ನೀಡಿದೆ.
ಗುರುವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಕರಾವಳಿಯಲ್ಲಿ ಮುಂದಿನ ಎರಡು ದಿನ ಇದೇ ಪರಿಸ್ಥಿತಿ ಮುಂದುವರೆಯುವ ನಿರೀಕ್ಷೆಯಿದೆ. ನಂತರ ಕ್ರಮೇಣ ತೀವ್ರತೆಯು ಕಡಿಮೆಯಾಗಲಿದೆ. ಆದಾಗ್ಯೂ ಹಗುರ, ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಉತ್ತರ ಒಳನಾಡಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜುಲೈ 3 ಮತ್ತು 4 ರಂದು ಗಂಟೆಗೆ 40 ರಿಂದ 50 ಕಿಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಧಾರವಾಡದಲ್ಲೂ ಭಾರಿ ಮಳೆ ನಿರೀಕ್ಷೆಯಿದೆ. ಇನ್ನೂ ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂಗಾರು ಅವಧಿಯುದ್ದಕ್ಕೂ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಪ್ರವಾಹ, ಭೂಕುಸಿತದಂತಹ ಪ್ರದೇಶಗಳಲ್ಲಿರುವ ಜನರು ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಪರಿಸ್ಥಿತಿಯನ್ನು ಇಲಾಖೆ ಸೂಕ್ಷ್ಮವಾಗಿ ಪರಿಶಿಲಿಸುತ್ತಿದ್ದು,ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿರುವುದಾಗಿ ಹವಾಮಾನ ಇಲಾಖೆ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.