ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇನ್ನು ರಸ್ತೆಗಳ ಗುಂಡಿ ತುಂಬ ನೀರು ತುಂಬಿದ್ದು, ಜನರ ಓಡಾಟ ದುಸ್ವಪ್ನವಾಗಿದೆ.
ರಾತ್ರಿ ಕೂಡ ಚಾಮರಾಜಪೇಟೆ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಮಳೆ ಸುರಿದಿದೆ. ಶನಿವಾರ ರಾತ್ರಿ ಸುರಿದಿದ್ದ ಮಳೆಗೆ ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದವು.
ಗ್ರೇಟರ್ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದ್ದು, ಕಿತ್ತುಹೋಗಿರುವ ರಸ್ತೆಗಳನ್ನು ಸರಿಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರ ಮಧ್ಯೆ ಇದೀಗ ಭಾನುವಾರ ರಾತ್ರಿ ಇಡೀ ಸುರಿದ ಮಳೆ ಮತ್ತಷ್ಟು ಅಧ್ವಾನ ಮಾಡಿಹಾಕಿದೆ. ಹೆಬ್ಬಾಳ, ಗೊರಗುಂಟೆಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಗಿದೆ.
ಬೆಂಗಳೂರಿನಲ್ಲಿ ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ನಿಧಾನಗತಿಯ ಸಂಚಾರ ಇದೆ. ವಿದ್ಯಾಶಿಲ್ಪ ರೈಲ್ವೆ ಅಂಡರ್ಪಾಸ್ ನಿಂದ ಏರ್ಪೋರ್ಟ್ ಕಡೆಗೂ ಸಂಚಾರ ನಿಧಾನ ಇದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.