ಹೊಸದಿಗಂತ ವರದಿ ಹಾಸನ :
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಜೋರು ಗಾಳಿ ಬೀಸುತ್ತಿರುವುದರಿಂದ ಹಲವು ಮರಗಳು ಧರಾಶಾಯಿಯಾಗಿವೆ. ವಿದ್ಯುತ್ ತಂತಿ ಮೇಲೆ ಮರ ಬೀಳುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ವಿದ್ಯುತ್ ತಂತಿ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಿ ನಿರಂತರ ವಿದ್ಯುತ್ ಪೂರೈಸಲು ಸೆಸ್ಕ್ ಸಿಬ್ಬಂದಿಗಳು ಶ್ರಮ ಪಡುತ್ತಿದ್ದಾರೆ.
ಸ್ಥಳೀಯರು ಸಹ ಇವರಿಗೆ ಸಾಥ್ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕ ಮಹಿಳೆಯರು ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಅಡಗಂಚನಹಳ್ಳಿ ಏರುರಸ್ತೆಯಲ್ಲಿ ಎರಡು ಮರ ಬಿದ್ದಿದ್ದರಿಂದ ಸಂಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪರಿಸ್ಥಿತಿಯನ್ನರಿತ ಕೂಲಿ ಕಾರ್ಮಿಕ ಮಹಿಳೆಯರು ಆಟೋದಿಂದ ಇಳಿದು ರಸ್ತೆಗೆ ಬಿದ್ದಿದ್ದ ಎರಡು ಮರಗಳ ರೆಂಬೆಗಳನ್ನು ಕತ್ತರಿಸುವುದರ ಮೂಲಕ ಇತರ ವಾಹನಗಳು ತೆರಳಲು ಅನುವು ಮಾಡಿಕೊಟ್ಟರು.
ಈ ವೇಳೆ ಆಟೋ ಚಾಲಕ ನಂದೀಶ್, ಹೂವಮ್ಮ,ಕಮಲ,ಸಿದ್ದಮ್ಮ,ಲೀಲಾ,ರಜಿನಿ,ಕಲಾವತಿ,ಹೇಮಾವತಿ ಇದ್ದರು.