ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಇಂದು ಉದ್ಘಾಟನೆಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೆಬ್ಬಾಳ ಫ್ಲೈಓವರ್ಗೆ ಹಸಿರು ನಿಶಾನೆ ತೋರಿದ್ದಾರೆ.
ಈ ಮೇಲ್ಸೇತುವೆ 500 ಮೀಟರ್ ಉದ್ದವಿದ್ದು, ಕೆ.ಆರ್. ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗಲು ಈ ಮೇಲ್ಸೇತುವೆ ವಾಹನ ಸವಾರರ ಓಡಾಟಕ್ಕೆ ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಈ ಫ್ಲೈ ಓವರ್ ನಿರ್ಮಿಸಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 31 ತಿಂಗಳಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ 94 ಕೋಟಿಗಳ ವೆಚ್ಚವಾಗಿದೆ ಎಂದು ವರದಿ ಆಗಿದೆ.
ಈ ಹೊಸ ಫ್ಲೈವರ್ ವಿಸ್ತರಣೆಯಿಂದಾಗಿ ಶೇ.30ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರದತ್ತ ಆಗಮಿಸುವ ಪ್ರಯಾಣಿಕರಿಗೆ ಈ ಮಾರ್ಗದಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಅಧಿಕಾರಿಗಳಿ ಅಂದಾಜಿಸಿದ್ದಾರೆ. ಎರಡು ದಿನ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಏಕಕಾಲದಲ್ಲಿ ಬೆಂಗಳೂರು ನಗರದತ್ತ ಆಗಮಿಸುವ ವಾಹನಗಳ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮೇಖ್ರಿ ಸರ್ಕಲ್ ಬಳಿ ಟ್ರಾಫಿಕ್ ದಟ್ಟಣೆ ಅಧಿಕವಾಗುತ್ತಿರೋದನ್ನು ಗುರುತಿಸಲಾಗಿದೆ.
ಸಾಮಾನ್ಯವಾಗಿ ಪೀಕ್ ಅವರ್ ವೇಳೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ಮುಂಭಾಗ ಆರಂಭವಾಗುವ ಟ್ರಾಫಿಕ್ ಗುಟ್ಟಹಳ್ಳಿ ಫ್ಲೈಒವರ್ ವರೆಗೂ ಇರುತ್ತದೆ. ಈ ಫ್ಲೈಓವರ್ ಸಂಚಾರದಿಂದ ಮತ್ತಷ್ಟು ಟ್ರಾಫಿಕ್ ಹೆಚ್ಚಾಗೋದನ್ನು ಅಲ್ಲಗಳೆಯುವಂತಿಲ್ಲ. ಆದರೆ ಹೆಬ್ಬಾಳ ಫ್ಲೈಓವರ್ ಅಂಡರ್ಪಾಸ್ ಬಳಿ ಟ್ರಾಫಿಕ್ ಜಾಮ್ಗಳು ಉಂಟಾಗಿದ್ದು, ಆ ಪ್ರದೇಶದ ಫೀಡರ್ ರಸ್ತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.