ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಸ್ಟೀಮ್ ಮಾಲ್ ಹಾಗೂ ಪಶುವೈದ್ಯಕೀಯ ಕಾಲೇಜಿನ ನಡುವೆ ಬರುವ 2.2 ಕಿ.ಮೀ ಉದ್ದದ ಈ ಸುರಂಗ ಮಾರ್ಗದಿಂದ 893 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಬೆಂಗಳೂರಿನ ಹಸಿರು ಕಾರಿಡಾರ್‌ಗಳಲ್ಲಿ ಒಂದರ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕಳವಳವಾಗುತ್ತಿದೆ, 893 ಮರಗಳು ಅಂದ್ರೆ ಸುಮ್ನೆ ಅಲ್ಲಾ ಎಂದು ಪರಿಸರವಾದಿಗಳು ಹೇಳುತ್ತಾರೆ. ಈ 893 ಮರಗಳಲ್ಲಿ ಶೇ. 85 ರಷ್ಟು ಮರಗಳನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ಬಿಡಿಎ ಆಸ್ತಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ.
ಮರಗಳನ್ನು ಬೇರು ಸಮೇತ ಕಿತ್ತು ಇನ್ನೊಂದು ಕಡೆಗೆ ಕಸಿ ಮಾಡುವುದು ಸಾಮಾನ್ಯವಾದ ಕೆಲಸ ಅಲ್ಲ. ಸರಿಯಾದ ಪ್ರೋಟೋಕಾಲ್‌ಗಳನ್ನು ಅನುಸರಿಸದೇ ಇದ್ದಲ್ಲಿ ಪ್ರೌಢ ಮರಗಳ ಕಸಿ ಹೆಚ್ಚಾಗಿ ವಿಫಲಗೊಳ್ಳುತ್ತದೆ ಎನ್ನಲಾಗಿದೆ. ಇಲ್ಲಿರುವ ಮರಗಳಲ್ಲಿ ಹೆಚ್ಚಿನ ಮರಗಳು ಕಸಿಗೆ ಸೂಕ್ತವಲ್ಲ. ಅವುಗಳ ಜಾತಿ-ನಿರ್ದಿಷ್ಟ ಮೌಲ್ಯಮಾಪನ, ಬೇರು ತಯಾರಿಕೆ ಮತ್ತು ಸ್ಥಳಾಂತರಿಸುವ ಮೊದಲು ತಿಂಗಳುಗಳ ಚಿಕಿತ್ಸೆಯ ಅಗತ್ಯವಿರುತ್ತದೆ, ಇದನ್ನು ವಿರಳವಾಗಿ ಅನುಸರಿಸಲಾಗುತ್ತದೆ ಎನ್ನಲಾಗಿದೆ.
ಈ ಮರಗಳನ್ನು ತೆಗೆಯುವುದೂ ಕೂಡ ಸವಾಲಿನ ಕೆಲಸ. ಭಾರೀ ಯಂತ್ರಗಳ ಸಹಾಯದಿಂದ ಮರವನ್ನು ಕಿತ್ತುಹಾಕಿದರೆ ಬೇರು ಹಾಗೂ ಕೊಂಬೆಗಳಿಗೆ ಹಾನಿಯಾಗಿ, ಅವುಗಳ ಜೀವಕ್ಕೆ ಹಾನಿಯಾಗುತ್ತದೆ. ಬೆಂಗಳೂರಿನ ಬೇಸಿಗೆಯನ್ನು ತಡೆದುಕೊಳ್ಳಲು ಜನ ಕಷ್ಟ ಪಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಮರಗಳನ್ನು ತೆಗೆಯುವುದು ಸೂಕ್ತವಲ್ಲ ಎಂದು ಪರಿಸರವಾದಿಗಳು ಹೇಳಿದ್ದಾರೆ.



