ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್ ಸೊರೆನ್ ED ಅಧಿಕಾರಿಗಳಿಂದ ಬಂಧಿತರಾಗಿ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಬೆನ್ನಲ್ಲೇ ರಾಜ್ಯ ರಾಜಕೀಯ ಮತ್ತೆ ಗರಿಗೆದರಿದೆ.
ನಿನ್ನೆಯಷ್ಟೇ ಹಾಲಿ ಸಿಎಂ ಚಂಪೈ ಸೊರೆನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ರಚಿಸುವಂತೆ ಜಾರ್ಖಂಡ್ ರಾಜ್ಯಪಾಲರು ಹೇಮಂತ್ ಸೊರೆನ್‌ಗೆ ಆಹ್ವಾನ ನೀಡಿದ್ದಾರೆ.
ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಗುರುವಾರ ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ಈ ಆಹ್ವಾನವನ್ನು ಸ್ವೀಕರಿಸಿರುವ ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಹೇಮಂತ್ ಸೊರೆನ್ ಅವರ ಬಂಧನವಾದ ಬಳಿಕ ಅವರ ಆಪ್ತ ಚಂಪೈ ಸೊರೆನ್ ಅವರು ಫೆಬ್ರವರಿ 2ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಇದೀಗ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಆಡಳಿತಾರೂಢ ಮೈತ್ರಿಕೂಟವು ಹೇಮಂತ್ ಸೊರೆನ್ ಅವರು ಮತ್ತೆ ಸಿಎಂ ಆಗಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.