ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೇಮಾವತಿ ನದಿಯ ನೀರಿನ ಹಂಚಿಕೆ ವಿಚಾರದಲ್ಲಿ ಯಾವುದೇ ತಾಲೂಕುಗಳಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನ ಎಲ್ಲಾ ತಾಲೂಕುಗಳ ಹಿತವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದ್ದು, ವರದಿ ಬಂದ ಬಳಿಕಲೇ ಕಾಮಗಾರಿ ಆರಂಭವಾಗಿದೆ. ಈ ವೇಳೆ ಕೆಲವರು ಪ್ರತಿಭಟನೆ ನಡೆಸಿದ್ದನ್ನು ಅವರು ಉಲ್ಲೇಖಿಸಿದರು.
ಕುಣಿಗಲ್‌ಗೆ ನೀರು ಪೈಪ್‌ಲೈನ್ ಮೂಲಕ ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಕೆಲವು ನಾಯಕರು ಕಾಲುವೆ ಮೂಲಕ ನೀರು ಸಾಗಿಸುವ ಸಲಹೆ ನೀಡಿದರೂ, ಪೈಪ್‌ಲೈನ್ ಅನ್ನು ಅನುಷ್ಠಾನಗೊಳಿಸುವುದು ಸೂಕ್ತ ಎಂದು ಸರ್ಕಾರ ನಿಶ್ಚಯಿಸಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಐಐಎಸ್ಸಿ ತಜ್ಞರಿಂದ ಸಮೀಕ್ಷೆ ನಡೆಸುವ ಶಿಫಾರಸು ಮಾಡಿದ್ದು, ಅದಕ್ಕೂ ಒಪ್ಪಿಗೆ ನೀಡಲಾಗಿದೆ. ಇಡೀ ತುಮಕೂರು ಜಿಲ್ಲೆಗೆ ನೀರು ತಲುಪಿಸಲು ಸುದೀರ್ಘ ಯೋಜನೆ ರೂಪಿಸಲಾಗಿದೆ. ಎಲ್ಲ ತಾಲೂಕಿನ ಹಿತವನ್ನು ಕಾಪಾಡುತ್ತೇವೆ ಎಂದು ಡಿಕೆಶಿ ಭರವಸೆ ನೀಡಿದರು.