ಹೊಸದಿಗಂತ ವರದಿ ಕುಶಾಲನಗರ:
ಕಾಡಾನೆಗಳ ಹಿಂಡೊಂದು ಗುರುವಾರ ಬೆಳಗ್ಗೆ ಹಾರಂಗಿ ನದಿಯಲ್ಲಿ ಕಾಣಿಸಿಕೊಂಡಿದ್ದು, ಆ ಭಾಗದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ದಾಹ ತೀರಿಸಿಕೊಳ್ಳಲೆಂದು ಸಮೀಪದ ಬೆಂಡೆಬೆಟ್ಟ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳು ಹುದುಗೂರು ಗ್ರಾಮದ ಹಾರಂಗಿ ನದಿಯಲ್ಲಿ ಕಾಣಿಸಿಕೊಂಡಿವೆ. ಮರಿಯಾನೆಗಳ ಸಹಿತ 10ಕ್ಕೂ ಅಧಿಕ ಆನೆಗಳಿರುವ ಹಿಂಡು ಹಾರಂಗಿ ನದಿಗೆ ಇಳಿದು ದಾಹ ತಣಿಸಿಕೊಂಡು ವಿಶ್ರಮಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್’ನಲ್ಲಿ ಸೆರೆಯಾಗಿದೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿವೆ. ಇದೀಗ ಈ ಕಾಡಾನೆಗಳ ಹಿಂಡನ್ನು ಕಂಡ ರೈತರು ಮತ್ತಷ್ಟು ಆತಂಕಗೊಂಡಿದ್ದು, ದಾಹ ತಣಿಸಿಕೊಂಡ ಕಾಡಾನೆಗಳು ನದಿಯಿಂದ ಹೊರ ಬಾರದೇ ಇದ್ದಾಗ, ಸ್ಥಳೀಯರು ಕೂಗೆಬ್ಬಿಸಿದ ಪರಿಣಾಮ ಅವುಗಳು ಮತ್ತೆ ಬೆಂಡೆಬೆಟ್ಟ ಮೀಸಲು ಅರಣ್ಯಕ್ಕೆ ತೆರಳಿರುವುದಾಗಿ ಹೇಳಲಾಗಿದೆ.