ಹೊಸದಿಗಂತ ಡಿಜಿಟಲ್ ಡೆಸ್ಕ್:
ನುಗ್ಗೆಕಾಯಿಯಿಂದ ಮಾಡಲಾಗುವ ವಿವಿಧ ಖಾದ್ಯಗಳು ನಿಮಗೆ ತಿಳಿದಿರುತ್ತವೆ. ಆದರೆ ನುಗ್ಗೆಕಾಯಿಗಿಂತ ಅದರ ಸೊಪ್ಪಿನಲ್ಲೇ ವಿಶೇಷ ಗುಣಗಳು ಹೆಚ್ಚಾಗಿವೆ. ಇದು ಕೊಂಚ ಕಹಿಯಾಗಿರುವುದರಿಂದ ಜನರು ಇದನ್ನು ಇಷ್ಟಪಡುವುದಿಲ್ಲ, ಆದರೆ ಈ ಎಲೆಗಳು ಆರೋಗ್ಯಕ್ಕೆ ಪೂರಕವಾಗಿದೆ.
ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನುಗ್ಗೆ ಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಅನೇಕ ಲಾಭಗಳಿಂದ ಕೂಡಿರುವ ನುಗ್ಗೆ ಸೊಪ್ಪಿನ ಪಲ್ಯ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು:
*ನುಗ್ಗೆಸೊಪ್ಪು
*ಈರುಳ್ಳಿ
*ಬೆಳ್ಳುಳ್ಳಿ
*ಮೊಟ್ಟೆ
*ಕೆಂಪು ಮೆಣಸಿನ ಕಾಯಿ
*ಅಡುಗೆ ಎಣ್ಣೆ
*ಸಾಸಿವೆ
*ಕಡಲೆ ಬೇಳೆ
*ಉದ್ದಿನ ಬೇಳೆ
*ಕಾಯಿತುರಿ
*ಉಪ್ಪು
ಮಾಡುವ ವಿಧಾನ:
*ಮೊದಲು ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ನಂತರ ನೀರು ಬಸಿದು ಒಂದು ಬದಿಯಲ್ಲಿಡಿ.
*ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ ನುಗ್ಗೆಸೊಪ್ಪನ್ನು ಚಿಕ್ಕ ಉರಿಯಲ್ಲಿ ಹದಿನೈದು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ.
*ಇನ್ನೊಂದು ಪಾತ್ರೆಯನ್ನು ಮಧ್ಯಮ ಉರಿಯಲ್ಲಿಟ್ಟು ಎಣ್ಣೆ ಹಾಕಿ ಕೊಂಚ ಬಿಸಿಯಾಗುತ್ತಿದ್ದಂತೆಯೇ ಈರುಳ್ಳಿ, ಬೆಳ್ಳುಳ್ಳಿ, ಕೆಂಪುಮೆಣಸು, ಸಾಸಿವೆ, ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಹಾಕಿ ಹುರಿಯಿರಿ.
*ಈಗ ಮೊಟ್ಟೆಯನ್ನು ಒಡೆದು ನೀರುಳ್ಳಿಯ ಮೇಲೆ ಸುರಿದು ತಕ್ಷಣ ತಿರುವುತ್ತಾ ಎಲ್ಲಾ ಪ್ರಮಾಣದಲ್ಲಿ ಮಿಳಿತವಾಗುವಂತೆ ನೋಡಿಕೊಳ್ಳಿ *ಇನ್ನು ಬೇಯಿಸಿಟ್ಟಿದ್ದ ನುಗ್ಗೆ ಎಲೆಗಳನ್ನು ಹಾಕಿ ಚೆನ್ನಾಗಿ ತಿರುವಿರಿ.
*ತದನಂತರ ಎಲೆಗಳು ಬೆಂದಿವೆಯೇ ನೋಡಿಕೊಳ್ಳಿ. ಬಳಿಕ ಕಾಯಿತುರಿ ಹಾಕಿ ತಿರುವಿ. ಕೂಡಲೇ ಒಲೆಯಿಂದಿಳಿಸಿ ತಣಿಯಲು ಬಿಡಿ.