ಹೊಸದಿಗಂತ ವರದಿ ಕಲಬುರಗಿ:
ನಗರದ ಹೊರವಲಯದ ಸೀತನೂರ ಬಳಿಯ ಕೇಂದ್ರ ಕಾರಾಗೃಹದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೈದಿಗಳ ಎಣ್ಣೆ ಪಾರ್ಟಿ, ಜೂಜಾಟವಾಡುತ್ತಿದ್ದ ಹೈಫೈ ಜೀವನದ ವಿಡಿಯೋ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಅರಿಯಲು ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಶನಿವಾರ ಬೆಳಗ್ಗೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದ ಸೆರೆಮನೆಯಲ್ಲಿ ಕೈದಿಗಳ ಇಸ್ಪೀಟ್ ಆಟ, ಎಣ್ಣೆ ಪಾರ್ಟಿ ಹಾಗೂ ಸಿಗರೇಟು ಸೇದುವ ವಿಡಿಯೋ ವೈರಲ್ ಹಿನ್ನೆಲೆ, ವಿಡಿಯೋ ಬಗ್ಗೆ ತನಿಖೆ ನಡೆಸುವಂತೆ ತನಿಖಾ ಸಂಸ್ಥೆ ರಚಿಸಿದ ಬಳಿಕ, ಶನಿವಾರ ಭೇಟಿ ನೀಡಿ ತಹಕೀಕಾತ ನಡೆಸುತ್ತಿದ್ದಾರೆ.
ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಡಿಜಿಪಿ,ಜೈಲಿನ ಪ್ರತಿಯೊಂದು ಬ್ಯಾರಕ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಲಿದ್ದು,ಜೈಲಿನಲ್ಲಿ ಅಕ್ರಮ ವಸ್ತುಗಳ ಸರಬರಾಜು ಹೇಗೆ ನಡೆಯುತ್ತಿದೆ? ಭದ್ರತಾ ಲೋಪಕ್ಕೆ ಕಾರಣ ಯಾರು? ಹಾಗೂ ಕೈದಿಗಳ ಐಷಾರಾಮಿ ಜೀವನ ನಡೆಸಲು ಹೇಗೆ ಸಾಧ್ಯ.? ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಪರಿಶೀಲನೆ ಸಂದರ್ಭದಲ್ಲಿ ಕಾರಾಗೃಹ ಇಲಾಖೆ ಎಐಜಿ ಆನಂದ ರೆಡ್ಡಿ, ಉತ್ತರ ವಲಯ ಡಿಐಜಿ ಪಿ. ಶೇಷಾ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜೈಲು ಅಧೀಕ್ಷಕಿ ಡಾ. ಅನಿತಾ ಸೇರಿ ಅನೇಕರು ಇದ್ದರು.

