March 23, 2026
Monday, March 23, 2026
spot_img

ಬೈಲಹೊಂಗಲಕ್ಕೆ ಹೈಟೆಕ್ ಸ್ಪರ್ಶ: 23 ಕೋಟಿ ವೆಚ್ಚದ 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಚಾಲನೆ!

ಹೊಸದಿಗಂತ ಬೆಳಗಾವಿ:

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪೈಕಿ ಅತ್ಯುತ್ತಮ ನಿರ್ವಹಣೆಯ ಮೂಲಕ ಗಮನ ಸೆಳೆದಿರುವ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಈಗ ಹೈಟೆಕ್ ಬಲ ಸಿಕ್ಕಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು 50 ಹಾಸಿಗೆಗಳ ನೂತನ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ನೂತನ ಘಟಕಕ್ಕಾಗಿ ಒಟ್ಟು 23 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಆಸ್ಪತ್ರೆಯ ಕಂಪೌಂಡ್ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 2 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಬೈಲಹೊಂಗಲ ಆಸ್ಪತ್ರೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಚಿವರು, “ಪ್ರತಿ ತಾಲೂಕು ಆಸ್ಪತ್ರೆಗಳು ಇದೇ ರೀತಿ ಕಾರ್ಯನಿರ್ವಹಿಸಿದರೆ ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳು ಸ್ಥಳೀಯವಾಗಿಯೇ ಪರಿಹಾರವಾಗುತ್ತವೆ” ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, “ಕಳೆದ 7 ವರ್ಷಗಳ ಹಿಂದೆ ದಿನಕ್ಕೆ ಕೇವಲ 110 ರೋಗಿಗಳು ಬರುತ್ತಿದ್ದರು, ಈಗ ದಿನಕ್ಕೆ 800ಕ್ಕೂ ಅಧಿಕ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಆಸ್ಪತ್ರೆಯ ಮೇಲಿರುವ ನಂಬಿಕೆಗೆ ಸಾಕ್ಷಿ” ಎಂದು ತಿಳಿಸಿದರು.

ಸಚಿವರು ತಮ್ಮ ಭಾಷಣದಲ್ಲಿ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಗಳನ್ನು ಸ್ಮರಿಸಿದರು.

ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ.

ಟೆಲಿ ಐಸಿಯು ಮತ್ತು ಗೃಹ ಆರೋಗ್ಯ ಯೋಜನೆಗಳ ಯಶಸ್ವಿ ಅನುಷ್ಠಾನ.

ಬೆಳಗಾವಿ ಜಿಲ್ಲೆಯ ಆರೋಗ್ಯ ಮೂಲಸೌಕರ್ಯಕ್ಕೆ ಒಟ್ಟು 300 ಕೋಟಿ ರೂ. ಅನುದಾನ.

ಬೈಲಹೊಂಗಲ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 200 ಹೆರಿಗೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಯಾವುದೇ ದೂರುಗಳಿಲ್ಲದೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಕೆ.ಎಸ್.ಆರ್.ಟಿ.ಸಿ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಜಿಲ್ಲಾ ಆರೋಗ್ಯ ಅಧಿಕಾರಿ ಈಶ್ವರ ಗಡಾದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !