ಮನೆ ಹಿತ್ತಲಲ್ಲಿ ಸಾಮಾನ್ಯವಾಗಿ ಕಂಡುಬರುವ ದಾಸವಾಳದ ಹೂವಿಗೆ (Hibiscus Flower) ದೈವಿಕ ಮಹತ್ವ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯದ ದೃಷ್ಟಿಯಿಂದಲೂ ಅಪಾರ ಪ್ರಾಮುಖ್ಯತೆ ಇದೆ. ಆಯುರ್ವೇದದಲ್ಲಿ ಪ್ರಾಚೀನ ಕಾಲದಿಂದಲೂ ಬಳಸುವ ಈ ಹೂವು ಇಂದು ಸೌಂದರ್ಯ ಪ್ರಿಯರ ನಡುವೆ ನೈಸರ್ಗಿಕ ಫೇಸ್ ಪ್ಯಾಕ್‌ಗಳ ರೂಪದಲ್ಲಿ ಹೊಸದಾಗಿ ಪ್ರಚಲಿತವಾಗಿದೆ.
ದಾಸವಾಳದ ಹೂವುಗಳಲ್ಲಿರುವ ಉತ್ಕೃಷ್ಠ ಉತ್ಕರ್ಷಣ ನಿರೋಧಕ (antioxidant) ಗುಣಗಳು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಹೂವು ಚರ್ಮದ ರಂಧ್ರಗಳನ್ನು ತೆರೆಯುವುದು, ಕಲೆಗಳನ್ನು ನಿವಾರಣೆ ಮಾಡುವುದು ಹಾಗೂ ಯುವಿ ಕಿರಣಗಳಿಂದ ರಕ್ಷಣೆ ನೀಡುವಲ್ಲಿ ಸಹಕಾರಿ. ಈ ಕಾರಣದಿಂದಾಗಿ ವಿವಿಧ ಫೇಸ್ ಪ್ಯಾಕ್‌ಗಳಲ್ಲಿ ಇದನ್ನು ಬಳಸಲಾಗುತ್ತಿದೆ.
ದಾಸವಾಳದ ಸರಳ ಫೇಸ್ ಪ್ಯಾಕ್:
2 ಚಮಚ ದಾಸವಾಳದ ಪುಡಿಯಲ್ಲಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರಕ್ಕೆ 2-3 ಬಾರಿ ಬಳಸಿದರೆ ಉತ್ತಮ ಪರಿಣಾಮ.
ಹಾಲು ಹಾಗೂ ದಾಸವಾಳದ ಪೇಸ್ಟ್:
2 ಚಮಚ ಹೂವಿನ ಪುಡಿಗೆ ಹಸಿ ಹಾಲು ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು 10 ನಿಮಿಷ ಚರ್ಮದ ಮೇಲೆ ಇರಿಸಿ, ನಂತರ ತೊಳೆಯಿರಿ. ಡ್ರೈ ಸ್ಕಿನ್ ಇರುವವರಿಗೆ ಇದು ಉತ್ತಮ.
ಗ್ರೀನ್ ಟೀ ಪ್ಯಾಕ್:
ಒಣಗಿಸಿದ ದಾಸವಾಳದ ಪುಡಿಗೆ 2 ಚಮಚ ಗ್ರೀನ್ ಟೀ ಸೇರಿಸಿ. ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆ ಮೇಲೆ 20 ನಿಮಿಷಗಳ ಕಾಲ ಇರಿಸಿ. ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಬಳಸಿದರೆ ಕಲೆಗಳು ಕಡಿಮೆಯಾಗುತ್ತವೆ.
ಅಲೋವೆರಾ ಪ್ಯಾಕ್:
ಅಲೋವೆರಾ ಜೆಲ್ ಮತ್ತು ದಾಸವಾಳದ ಪುಡಿಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಚರ್ಮದ ಮೇಲೆ ಇರಿಸಿ. ಇದು ತ್ವಚೆಗೆ ತೇವವನ್ನು ನೀಡುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ತರುತ್ತದೆ.