Sunday, December 14, 2025

High cholesterol | ಸಣ್ಣಗಿರುವವರಲ್ಲೂ ಹೆಚ್ಚಾಗ್ತಿದೆ ಅಧಿಕ ಕೊಲೆಸ್ಟ್ರಾಲ್‌! ಕಾರಣ ಏನು?

ತೆಳ್ಳಗಿನ ದೇಹವಿದ್ದರೆ ಹೃದಯ ರೋಗಗಳಿಂದ ದೂರವಿರಬಹುದು ಎಂಬ ಸಾಮಾನ್ಯ ನಂಬಿಕೆ ಈಗ ತಲೆಕೆಳಗಾದಂತಿದೆ. ಇತ್ತೀಚಿನ ವೈದ್ಯಕೀಯ ಅಧ್ಯಯನಗಳು ಹಾಗೂ ಹೃದಯ ತಜ್ಞರ ಅಭಿಪ್ರಾಯಗಳು, ದೇಹದ ತೂಕ ಸಾಮಾನ್ಯವಾಗಿದ್ದರೂ ಅಥವಾ ಸಣ್ಣಗಿದ್ದರೂ ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆ ಎದುರಾಗಬಹುದು ಎಂದು ಎಚ್ಚರಿಸುತ್ತಿವೆ. ಅನೇಕ ಸಂದರ್ಭಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಅಪಧಮನಿಗಳಲ್ಲಿ ವರ್ಷಗಳ ಕಾಲ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತಿದ್ದು, ಹೃದಯಾಘಾತಕ್ಕೆ ಕಾರಣವಾಗುತ್ತಿರುವುದು ಆತಂಕ ಮೂಡಿಸಿದೆ.

ವೈದ್ಯರ ಪ್ರಕಾರ, ದೇಹದಲ್ಲಿನ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಆಹಾರದಿಂದ ಮಾತ್ರ ಬರುವುದಿಲ್ಲ. ಯಕೃತ್ತು ಸ್ವತಃ ಕೊಲೆಸ್ಟ್ರಾಲ್ ಉತ್ಪಾದಿಸುತ್ತದೆ. ಕೆಲವು ಜನರಲ್ಲಿ ಜನ್ಮತಃ ಇರುವ ಜೀನ್ಸ್ ದೋಷದಿಂದ LDL ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂತಹವರು ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಪಾಲಿಸಿದರೂ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರಬಹುದು. ಇದನ್ನು ಕುಟುಂಬಿಕ ಹೈಪರ್‌ಕೊಲೆಸ್ಟರಾಲ್ಮಿಯಾ ಎಂದು ಕರೆಯಲಾಗುತ್ತದೆ.

ಅಧ್ಯಯನಗಳ ಪ್ರಕಾರ, ಸಣ್ಣಗಿರುವ ಯುವಕರಲ್ಲೂ ಅಪಧಮನಿಗಳಲ್ಲಿ ಪ್ಲೇಕ್ ಜಮಾವಣೆ ಹೆಚ್ಚುತ್ತಿರುವುದು ಕಂಡುಬಂದಿದೆ. LDL ಮಟ್ಟ 190 mg/dL ಮೀರಿದರೆ, ದೇಹದ ತೂಕಕ್ಕಿಂತಲೂ ಅಪಾಯ ಹೆಚ್ಚಾಗುತ್ತದೆ. HDL ಕಡಿಮೆ ಹಾಗೂ ಟ್ರೈಗ್ಲಿಸರೈಡ್ ಹೆಚ್ಚಿದ್ದರೆ ಹೃದಯಕ್ಕೆ ಮತ್ತಷ್ಟು ಹಾನಿಯ ಸಂಭವ ಇದೆ.

ಹೃದಯಾಘಾತದ ಕುಟುಂಬ ಇತಿಹಾಸ ಇರುವವರು ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಮೊದಲಿನಿಂದಲೇ ಕೊಲೆಸ್ಟ್ರಾಲ್ ಪರೀಕ್ಷೆ ಮತ್ತು ಹೃದಯ ತಪಾಸಣೆ ಮಾಡಿಸಿಕೊಂಡರೆ, ದೊಡ್ಡ ಅಪಾಯವನ್ನು ತಪ್ಪಿಸಿಕೊಳ್ಳಲು ಸಾಧ್ಯವೆಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!