ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮ್ಮ ವಿರುದ್ಧದ ಗಡಿಪಾರು ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದ್ದು, ಮುಂದಿನ ಆದೇಶದವರೆಗೆ ಗಡಿಪಾರು ಆದೇಶವನ್ನು ಜಾರಿಗೊಳಿಸದಂತೆ ಮಹತ್ವದ ಸೂಚನೆ ನೀಡಿದೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಹೊರಡಿಸಿದ್ದ ಗಡಿಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ ತಿಮರೋಡಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಆದಾಗ್ಯೂ, ಪೀಠವು ಈ ಮಧ್ಯಂತರದಲ್ಲಿ ಬಲವಂತದ ಕ್ರಮ ಬೇಡ ಮತ್ತು ಗಡಿಪಾರು ಜಾರಿಗೊಳಿಸದಂತೆ ಸೂಚನೆ ನೀಡಿದೆ. ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗಡಿಪಾರಿನಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣವಾದ ಸೌಜನ್ಯ ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದ ತಿಮರೋಡಿ ಅವರನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಮಹೇಶ್ ತಿಮರೋಡಿ ಅವರ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಗಳು ಕೇಳಿಬಂದಿದ್ದವು. ಈ ಆದೇಶದ ಅಡಿಯಲ್ಲಿ ತಿಮರೋಡಿ ಅವರನ್ನು ಒಂದು ವರ್ಷಗಳ ಕಾಲ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿತ್ತು. ಇದೀಗ ಹೈಕೋರ್ಟ್ ಆದೇಶದಿಂದ ಗಡಿಪಾರು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಬಿದ್ದಿದೆ.