April 10, 2026
Friday, April 10, 2026
spot_img

ಪಾಕ್–ಇಸ್ರೇಲ್ ನಡುವೆ ‘ಹೈ ಲೆವೆಲ್’ ಕಚ್ಚಾಟ: ಶಾಂತಿ ಮಾತುಕತೆ ನಡುವೆಯೇ ಬಾಯಿಬಡ್ಕೊಂಡ ಖ್ವಾಜಾ ಆಸಿಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದದ ವಾತಾವರಣ ಮುಂದುವರಿದಿರುವ ನಡುವೆಯೇ, ಪಾಕಿಸ್ತಾನ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ತೀವ್ರ ವಾಗ್ವಾದ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸುತ್ತಿರುವ ಸಮಯದಲ್ಲೇ, ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಖ್ವಾಜಾ ಆಸಿಫ್, ಇಸ್ರೇಲ್‌ನ್ನು ಕಟುವಾಗಿ ಟೀಕಿಸಿ, ಅದನ್ನು “ಮಾನವತೆಗೆ ಶಾಪ” ಹಾಗೂ ‘ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ಟೀನ್ ಭೂಮಿಯಲ್ಲಿ ಈ ‘ಕ್ಯಾನ್ಸರ್‌ಕಾರಕ ರಾಷ್ಟ್ರ’ವನ್ನು (ಇಸ್ರೇಲ್) ಸೃಷ್ಟಿಸಿದವರು ನರಕದಲ್ಲಿ ಬೆಂದು ಹೋಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದೂ ಕಿಡಿಕಾರಿದ್ದಾರೆ. ನಂತರ ಈ ಪೋಸ್ಟ್ ಅಳಿಸಲ್ಪಟ್ಟಿದ್ದರೂ, ಅದರ ಸ್ಕ್ರೀನ್‌ಶಾಟ್‌ಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇದನ್ನೂ ಓದಿ:

ಈ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಂತಿ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ದೇಶದ ಸಚಿವರಿಂದ ಇಂತಹ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಲೆಬನಾನ್‌ನಲ್ಲಿ ಸೈನಿಕ ಕಾರ್ಯಾಚರಣೆ ಮುಂದುವರಿಯುವ ಬಗ್ಗೆ ಇಸ್ರೇಲ್ ಸ್ಪಷ್ಟಪಡಿಸಿದ್ದು, ಮುಂದಿನ ಮಾತುಕತೆಗಳ ಮೇಲೂ ಇದರ ಪರಿಣಾಮ ಬೀಳುವ ಸಾಧ್ಯತೆ ಇದೆ. ಪಾಕಿಸ್ತಾನ ಮಧ್ಯಸ್ಥಿಕೆದಾರನ ಪಾತ್ರವಹಿಸಲು ಯತ್ನಿಸುತ್ತಿರುವ ಸಮಯದಲ್ಲಿ ಈ ವಾಗ್ವಾದ ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !