ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಗಣಿನಾಡು’ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ಕರಾಳ ಅಧ್ಯಾಯ ಮತ್ತೆ ಮುನ್ನೆಲೆಗೆ ಬಂದಿದೆ. ಆಂಧ್ರಪ್ರದೇಶದ ಗಣಿ ಪರವಾನಗಿ ಬಳಸಿಕೊಂಡು ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದು ಈಗ ಅಧಿಕೃತವಾಗಿ ಸಾಬೀತಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದ ಹೈಟೆಕ್ ಸರ್ವೇ ಈ ಸ್ಫೋಟಕ ಸತ್ಯವನ್ನು ಹೊರಹಾಕಿದ್ದು, ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಕಳೆದ ತಿಂಗಳು ನಿವೃತ್ತ ನ್ಯಾಯಾಧೀಶ ಸುಧಾಂಶು ಧುಲಿಯಾ ನೇತೃತ್ವದ ತಂಡ ಆಂಧ್ರದ ಗಡಿ ಗ್ರಾಮಗಳಲ್ಲಿ ಡ್ರೋನ್ ಮೂಲಕ ಹೈಟೆಕ್ ಸರ್ವೇ ನಡೆಸಿತ್ತು.
ಜನಾರ್ದನ ರೆಡ್ಡಿ ಮಾಲೀಕತ್ವದ ಒಎಂಸಿ ಕಂಪನಿಯು ಕರ್ನಾಟಕ ಮತ್ತು ಆಂಧ್ರದ ನಡುವಿನ ಅಂತರರಾಜ್ಯ ಗಡಿಯನ್ನೇ ನಾಶಪಡಿಸಿರುವುದು ದೃಢಪಟ್ಟಿದೆ.
ಅಂತರಗಂಗಮ್ಮ (68.50 ಹೆಕ್ಟೇರ್) ಮತ್ತು ಓಎಂಸಿ 2 (39.50 ಹೆಕ್ಟೇರ್) ಪ್ರದೇಶಗಳಲ್ಲಿ ಗಡಿ ಗುರುತುಗಳು ಮ್ಯಾಚ್ ಆಗುತ್ತಿಲ್ಲ. ಈ ಕಂಪನಿಗಳು ಕರ್ನಾಟಕದ ಭೂಮಿಯನ್ನು ಅತಿಕ್ರಮಣ ಮಾಡಿವೆ ಎಂದು ಸಮಿತಿ ವರದಿ ನೀಡಿದೆ.
ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ ಮತ್ತು ತುಮಟಿಯಲ್ಲಿ ಸುಮಾರು 28.90 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಹೊರತೆಗೆದು ಸಾಗಿಸಲಾಗಿದೆ ಎಂಬ ಗಂಭೀರ ಅಂಶ ವರದಿಯಲ್ಲಿದೆ.
ಈಗಾಗಲೇ ಸಿಬಿಐ ನ್ಯಾಯಾಲಯದಿಂದ ಶಿಕ್ಷೆ ಎದುರಿಸುತ್ತಿರುವ ರೆಡ್ಡಿಗೆ ಈ ಹೊಸ ವರದಿ ಮತ್ತೊಂದು ಬಲವಾದ ಏಟು ನೀಡಿದೆ. ನ್ಯಾಯಮೂರ್ತಿ ಧುಲಿಯಾ ವರದಿಗೆ ಆಕ್ಷೇಪಣೆ ಸಲ್ಲಿಸಲು ಗಣಿ ಮಾಲೀಕರಿಗೆ ಅವಕಾಶ ನೀಡಲಾಗಿದೆ.
2026ರ ಜನವರಿ 5ರಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅಲ್ಲಿ ಸೂಕ್ತ ದಾಖಲೆ ಸಲ್ಲಿಸದಿದ್ದರೆ ಮುಂದಿನ ಮೂರು ತಿಂಗಳೊಳಗೆ ಅಂತಿಮ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ.

