ದಿಗಂತ ವರದಿ ಕಾರವಾರ:
ಇಲ್ಲಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಕೋಲಾದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದ ಪ್ರವೇಶ ದ್ವಾರದ ಬಳಿ ಗುಡ್ಡ ಕುಸಿತ ಸಂಭವಿಸಿದ್ದು ತಾತ್ಕಾಲಿಕವಾಗಿ ಒಂದು ಬದಿಯಲ್ಲಿ ಸುರಂಗ ಮಾರ್ಗದ ಸಂಚಾರ ಬಂದ್ ಮಾಡಲಾಗಿದೆ.
ಶನಿವಾರ ಬೆಳಿಗ್ಗೆ ಸುರಂಗ ಮಾರ್ಗದ ಪ್ರವೇಶ ದ್ವಾರದ ಪಕ್ಕದ ಗುಡ್ಡದಿಂದ ಮಣ್ಣು ಮತ್ತು ಕಲ್ಲುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದು ಐ ಆರ್ ಬಿ ವತಿಯಿಂದ ಕಲ್ಲು ಮಣ್ಣು ತೆರುವು ಕಾರ್ಯಾಚರಣೆ ಸಾಗಿದೆ.
ಅಂಕೋಲಾ ಕಡೆಯಿಂದ ಕಾರವಾರ ಕಡೆ ಸಂಚರಿಸುವ ವಾಹನಗಳನ್ನು ಬೈತಕೋಲ್ ಮಾರ್ಗದಿಂದ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಬಿಣಗಾ ಬಳಿ ನಿರ್ಮಾಣ ಮಾಡಲಾಗಿರುವ ಈ ಸುರಂಗ ಮಾರ್ಗದ ಅಕ್ಕ ಪಕ್ಕದಲ್ಲಿ ಮತ್ತು ಒಳ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ಜಲಪಾತದಂತೆ ಸುರಿಯುತ್ತಿದ್ದು ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಹಲವಾರು ದಿನಗಳ ಕಾಲ ಸುರಂಗ ಮಾರ್ಗದ ಸಂಚಾರ ಬಂದ್ ಮಾಡಲಾಗಿತ್ತು.
ಮಳೆ ಕಡಿಮೆಯಾದ ನಂತರ ಸುರಂಗ ಮಾರ್ಗದ ಸುರಕ್ಷತೆ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಸುರಂಗ ಮಾರ್ಗದ ಪ್ರವೇಶ ದ್ವಾರದ ಬಳಿ ಮತ್ತೆ ಗುಡ್ಡ ಕುಸಿತ ಸಂಭವಿಸಿ ಬಂಡೆಗಳು ಉರುಳಿದ್ದು ಸುರಂಗ ಮಾರ್ಗದಲ್ಲಿ ಪ್ರಯಾಣದ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಎದ್ದಿವೆ.