ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖ್ ಅವರು ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ಧಾರಾಕಾರ ಮಳೆ ಬರುತ್ತಿರುವುದರಿಂದ ಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು. 1100, 1070 ಮತ್ತು 1077 ಸಂಖ್ಯೆಗಳೊಂದಿಗೆ ಮೂರು ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದ್ದು, ಯಾವುದೇ ತುರ್ತು ಅಗತ್ಯವಿದ್ದಲ್ಲಿ ಕರೆ ಮಾಡುವಂತೆ ಸೂಚಿಸಿದರು.
ಈ ವಿಪತ್ತಿನ ಸಂದರ್ಭದಲ್ಲಿ ಜನರು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಸಹಾಯ ಮಾಡಲು ದಿನದ 24 ಗಂಟೆಗಳ ಕಾಲ ಲಭ್ಯವಿರುತ್ತಾರೆ. ಮುಖ್ಯಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿ ಜನರಿಗೆ ಸಹಾಯ ಮಾಡುವಂತೆ ಶಾಸಕರಿಗೆ ಸೂಚಿಸಿದ್ದಾರೆ. “ದಯವಿಟ್ಟು ಈ ದುರಂತದ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಮತ್ತು ಅವರ ನಷ್ಟಕ್ಕೆ ಪರಿಹಾರವನ್ನು ಪಡೆಯುವಂತೆ ನೋಡಿಕೊಳ್ಳಿ” ಎಂದು ಸಿಎಂ ಸುಖ್ ಕೇಳಿದರು.
ಈ ಪ್ರವಾಹ ಅನಾಹುತದಿಂದ ಇದುವರೆಗೆ 14 ಮಂದಿ ಸಾವನ್ನಪ್ಪಿದ್ದು, ನಾಪತ್ತೆಯಾಗಿರುವವರನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಎಂ ವಿವರಿಸಿದರು. ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಜನರನ್ನು ರಕ್ಷಿಸಲು ವಿಪತ್ತು ನಿರ್ವಹಣಾ ಪಡೆಗಳು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಭೂಕುಸಿತ ಮತ್ತು ಪ್ರವಾಹದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನಾಲಿ, ಕುಲು, ಕಿನ್ನೈರ್ ಮತ್ತು ಚಂಬಾ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.