ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಗಿಪುಲ್ ಪ್ರದೇಶದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಪ್ರವಾಸಿಗರೊಂದಿಗೆ 200 ಕ್ಕೂ ಹೆಚ್ಚು ಸ್ಥಳೀಯರು ಸಿಲುಕಿಕೊಂಡಿದ್ದಾರೆ. ಬಗಿಪುಲ್ ಪ್ರದೇಶದ ಪ್ರಶಾರ್ ಸರೋವರದ ಬಳಿ ಪ್ರವಾಹ ಉಂಟಾಗಿರುವುದಾಗಿ ಮಂಡಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಎನ್‌ಡಿಆರ್‌ಎಫ್ ತಂಡ ಈ ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಅಧಿಕಾರಿಗಳು ತಿಳಿಸಿದ್ದಾರೆ. ಚಂಬಾದಿಂದ ವಿದ್ಯಾರ್ಥಿಗಳ ಬಸ್ ಮತ್ತು ಪರಾಶರದಿಂದ ಹಿಂತಿರುಗುತ್ತಿದ್ದ ಹಲವಾರು ವಾಹನಗಳು ಸಿಕ್ಕಿಬಿದ್ದಿರುವುದಾಗಿ ಕಚಿತಪಡಿಸಿದ್ದಾರೆ.
ಹಠಾತ್ ಪ್ರವಾಹದಿಂದ ಉಂಟಾದ ಭೂಕುಸಿತಗಳು ಚಂಡೀಗಢ-ಮನಾಲಿ ಹೆದ್ದಾರಿಯನ್ನು ಮುಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ಹಿಮಾಚಲದ ಕಂಗ್ರಾ ನಗರದ ಹಲವು ಭಾಗಗಳು ಜಲಾವೃತಗೊಂಡಿವೆ. ಮಂಡಿ-ಜೋಗಿಂದರ್ ನಗರ ಹೆದ್ದಾರಿಯನ್ನೂ ಮುಚ್ಚಲಾಗಿದೆ. ಭೂಕುಸಿತ ಅಪಾಯ ಕಾರಣಗಳಿಂದಾಗಿ ಈ ರಸ್ತೆಗಳಲ್ಲಿ ಜನಸಾಮಾನ್ಯರು ಮತ್ತು ಪ್ರವಾಸಿಗರು ಪರ್ವತಗಳ ಪಕ್ಕದ ರಸ್ತೆಗಳಲ್ಲಿ ಸಂಚರಿಸದಂತೆ ಪೊಲೀಸರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮಂಡಿಯಲ್ಲಿ 64.4 ಮಿ.ಮೀ, ಧರ್ಮಶಾಲಾದಲ್ಲಿ 106.6 ಮಿ.ಮೀ, ಕತೌಲಾ 74.5 ಮಿ.ಮೀ ಹಾಗೂ ಗೋಹರ್ 67 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.