Tuesday, January 13, 2026
Tuesday, January 13, 2026
spot_img

ಬಾಂಗ್ಲಾ ಪೊಲೀಸ್ ಕಸ್ಟಡಿಯಲ್ಲಿ ಹಿಂದು ಲೀಡರ್ ಸಾವು: ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ ಎಂದ ಕುಟುಂಬಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ರಾಜಕೀಯ ಹಾಗೂ ಮಾನವ ಹಕ್ಕುಗಳ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅವಾಮಿ ಲೀಗ್ ಪಕ್ಷದ ಹಿಂದು ನಾಯಕ ಪ್ರಳಯ್ ಚಾಕಿ ಅವರು ಚಿಕಿತ್ಸೆ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

60 ವರ್ಷದ ಪ್ರಳಯ್ ಚಾಕಿ ಅವರು ಅವಾಮಿ ಲೀಗ್‌ನ ಪಬ್ನಾ ಜಿಲ್ಲಾ ಘಟಕದ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ಜೈಲು ಕಸ್ಟಡಿಯಲ್ಲಿದ್ದ ಅವರನ್ನು ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಮೊದಲು ಪಬ್ನಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಿತಿ ಗಂಭೀರವಾದ ಕಾರಣ ರಾಜಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಸೂಪರಿಂಟೆಂಡೆಂಟ್ ಎಂಡಿ ಓಮೋರ್ ಫಾರೂಕ್ ಮಾತನಾಡಿ, ಚಾಕಿ ಮಧುಮೇಹ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಔಷಧಿ ನೀಡಲಾಗಿದೆ ಹಾಗೂ ಅಗತ್ಯವಿದ್ದಾಗಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಚಾಕಿಯ ಪುತ್ರ ಸೋನಿ ಚಾಕಿ, ಜೈಲಿನಲ್ಲಿ ತಂದೆಯ ಆರೋಗ್ಯ ತೀವ್ರವಾಗಿ ಹದಗೆಟ್ಟರೂ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಲಾಗಲಿಲ್ಲ ಎಂದು ಆರೋಪಿಸಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಈ ಸಾವು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ ಈ ಘಟನೆಯೊಂದಿಗೆ ಮತ್ತಷ್ಟು ಗಮನ ಸೆಳೆಯುತ್ತಿದೆ.

Most Read

error: Content is protected !!