ಹಿಂದು ಎಂದರೆ ಮಹಾಸಾಗರ..ಉಳಿದೆಲ್ಲ ಮತ-ಪಂಥಗಳು ನದಿ: ವಚನಾನಂದ ಸ್ವಾಮೀಜಿ

ಹೊಸದಿಗಂತ ವರದಿ, ದಾವಣಗೆರೆ:

ಹಿಂದು ಎಂಬುದು ಶ್ರೇಷ್ಠ ಮತ್ತು ಸತ್ಯ ಸನಾತನವಾದದ್ದು. ಅದೊಂದು ಅತ್ಯಂತ ಶುದ್ಧ ಜೀವನಶೈಲಿ. ಮೂಲದಲ್ಲಿ ನಾವೆಲ್ಲರೂ ಹಿಂದುಗಳೇ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಎಂಬುದು ಒಂದು ಮಹಾಸಾಗರ. ಉಳಿದೆಲ್ಲ ಮತ-ಪಂಥಗಳು ಆ ಮಹಾಸಾಗರದ ನದಿಗಳು. ಬಸವ ಪಥ, ಜೈನಪಥ, ಬೌದ್ಧ ಪಥ ಹೀಗೆ ಯಾವುದೇ ಇದ್ದರೂ, ಮೂಲ ಎಂಬುದು ಬಂದಾಗ ನಾವೆಲ್ಲ ಹಿಂದುಗಳು ಎಂಬುದೇ ಸತ್ಯ. ಈ ವಿಚಾರಕ್ಕೆ ನಾವು ಹಿಂದೆ ಬದ್ಧರಿದ್ದೆವು. ಇಂದು ಹಾಗೂ ನಾಳೆಯೂ ಅದಕ್ಕೆ ಬದ್ಧರಿರುತ್ತೇವೆ. ಯಾವುದಾದರೂ ಗುರುಪೀಠಗಳು ಬೇರೆ ರೀತಿ ವಿಮರ್ಶಿಸಿದರೆ, ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದು ಎಂಬುದೊಂದು ವಟವೃಕ್ಷ. ಅದರಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ. ಗೌತಮ ಬುದ್ಧ, ಮಹಾವೀರ, ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು ಅಲ್ಲಿಂದಲೇ ಬಂದವರು. ಹಾಗಾಗಿಯೇ ನಮ್ಮ ದಾಖಲೆಗಳಲ್ಲಿ ಹಿಂದು ಲಿಂಗಾಯತ ಅಂತಲೇ ಇದೆ. ಕೆಲವರು ಹಿಂದು ವೀರಶೈವ ಅಂತಾ ಬರೆಸುತ್ತಾರೆ. ತಾತ್ವಿಕ ಮತ್ತು ಧಾರ್ಮಿಕವಾಗಿ ಸ್ವಲ್ಪ ವ್ಯತ್ಯಾಸ ಇದ್ದರೂ, ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕವಾಗಿ ಇಡೀ ಅಖಂಡ ವೀರಶೈವ ಲಿಂಗಾಯತರೆಲ್ಲರೂ ಒಂದು. ಇದು ಹಿಂದು ವಿಚಾರಧಾರೆಗೆ ಪೂರಕವಾದದ್ದು ಎಂದು ಅವರು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here