ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ನಲ್ಲೂ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 (Hindu Religious Institutions and Charitable Endowments Bill 2024) ಮಂಡನೆ ಮಾಡಲಾಗಿದೆ. ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ ರಾಜ್ಯ ಸರ್ಕಾರ ಅನುದಾನವನ್ನು ಮೀಸಲಿಟ್ಟಿದೆ.
ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ ನಂತರ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಿರುವ ನಿಯಮದಂತೆ ಸರ್ಕಾರಕ್ಕೆ 8 ಕೋಟಿ ರೂ. ಸಲ್ಲಿಕೆ ಆಗುತ್ತಿದೆ ಎಂದರು.
ವಿ.ಎಸ್.ಆಚಾರ್ಯ ಸಚಿವರಾಗಿದ್ದಾಗ 2011 ರಲ್ಲಿಈ ವಿಧೇಯಕಕ್ಕೆ ತಿದ್ದುಪಡಿ ತಂದಿದ್ದರು. ಈಗಿನ ಸಾಮಾನ್ಯ ಸಂಗ್ರಹಣ ನಿಧಿಯಿಂದ ಧಾರ್ಮಿಕ ಕೆಲಸ ಮಾಡಲಾಗಲ್ಲ. ಹೊಸ ನಿಯಮದಿಂದ 60 ಕೋಟಿ ರೂಪಾಯಿ ಹಣ ಸಂಗ್ರಹ ಆಗುತ್ತಿದೆ. ಸಿ ದರ್ಜೆಯ ದೇಗುಲಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ಸಿ ದರ್ಜೆಯ ದೇವಸ್ಥಾನಗಳಿದ್ದು, 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34165 ದೇವಸ್ಥಾನಗಳ ಅರ್ಚಕರ ಮನೆ ಕಟ್ಟಲು ಅನುದಾನ ನೀಡುತ್ತೇವೆ. ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದ್ದು, ಇದಕ್ಕೆ 5 ಕೋಟಿ ಹಣ ಮೀಸಲಿಡುತ್ತೇವೆ. ಅರ್ಚಕರು ಮೃತಪಟ್ಟರೆ 2 ಲಕ್ಷ ಹಣ ನೀಡುತ್ತೇವೆ. ಅರ್ಚಕರಿಗೆ ವಿಮೆ ಕೂಡ ಮಾಡಲು ತೀರ್ಮಾನಿಸಿದ್ದೇವೆ. ಅದಕ್ಕೆ 7 ಕೋಟಿ ರೂಪಾಯಿ ಬೇಕು. ಅರ್ಚಕರು, ನೌಕರರು, ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಡುತ್ತೇವೆ. ಈ ಹಣವನ್ನು ಸಿ ಗ್ರೇಡ್ ದೇವಸ್ಥಾನಗಳಿಗೆ ಮಾತ್ರ ಮೀಸಲಿರಿಸಲಾಗಿದೆ ಎಂದರು.