ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಒಂಟಾರಿಯೊದ ವಿಂಡ್ಸರ್‌ನಲ್ಲಿ ಭಾರತ ವಿರೋಧಿ ಗೀಚುಬರಹದೊಂದಿಗೆ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿರುವುದಾಗಿ ವಿಂಡ್ಸರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿಂಡ್ಸರ್ ಪೊಲೀಸ್ ಸೇವೆಯು ವಿಧ್ವಂಸಕ ಕೃತ್ಯವನ್ನು “ದ್ವೇಷ-ಪ್ರೇರಿತ ಘಟನೆ” ಎಂದು ಪರಿಗಣಿಸಿದ್ದು, ತನಿಖೆಯನ್ನು ಪ್ರಾರಂಭಿಸಿದೆ.
ಏಪ್ರಿಲ್ 5, 2023 ರಂದು, ದ್ವೇಷ-ಪ್ರೇರಿತ ವಿಧ್ವಂಸಕತೆಯ ವರದಿಯ ನಂತರ ನಾರ್ತ್‌ವೇ ಅವೆನ್ಯೂದ 1700 ಬ್ಲಾಕ್‌ನಲ್ಲಿರುವ ಹಿಂದೂ ದೇವಾಲಯಕ್ಕೆ ಅಧಿಕಾರಿಗಳನ್ನು ಕಳುಹಿಸಲಾಯಿತು. ಕಟ್ಟಡದ ಹೊರ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಗೀಚುಬರಹವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
12 ಗಂಟೆಯ ನಂತರ (ಸ್ಥಳೀಯ ಕಾಲಮಾನ) ಪ್ರದೇಶದಲ್ಲಿ ಇಬ್ಬರು ಶಂಕಿತರ ವೀಡಿಯೊವೊಂದನ್ನು ಬಿಡುಗಡೆ ಮಾಡಿದರು.
“ವೀಡಿಯೊದಲ್ಲಿ, ಒಬ್ಬ ಶಂಕಿತನು ಕಟ್ಟಡದ ಗೋಡೆಯ ಮೇಲೆ ವಿಧ್ವಂಸಕ ಕೃತ್ಯವನ್ನು ಎಸಗುತ್ತಿರುವಂತೆ ತೋರುತ್ತಿದೆ, ಆದರೆ ಇನ್ನೊಬ್ಬನು ಆಚೆ ಈಚೆ ಗಮನಿಸುತ್ತಿದ್ದಾನೆ”.
ಒಬ್ಬ ಶಂಕಿತ ಕಪ್ಪು ಸ್ವೆಟರ್, ಎಡಗಾಲಿನಲ್ಲಿ ಸಣ್ಣ ಬಿಳಿ ಲೋಗೋ ಹೊಂದಿರುವ ಕಪ್ಪು ಪ್ಯಾಂಟ್, ಕಪ್ಪು ಮತ್ತು ಬಿಳಿ ಎತ್ತರದ ಓಟದ ಬೂಟುಗಳನ್ನು ಧರಿಸಿದ್ದರು. ಎರಡನೇ ಶಂಕಿತ ಕಪ್ಪು ಪ್ಯಾಂಟ್, ಸ್ವೆಟ್ಶರ್ಟ್ ಕಪ್ಪು ಬೂಟುಗಳು ಮತ್ತು ಬಿಳಿ ಸಾಕ್ಸ್ ಧರಿಸಿದ್ದಾರೆ.
ಶಂಕಿತರಿಗಾಗಿ ವಿಂಡ್ಸರ್ ಪೊಲೀಸರು ದೇವಸ್ಥಾನದ ಸಮೀಪದಲ್ಲಿರುವ ನಿವಾಸಿಗಳಿಗೆ ರಾತ್ರಿ 11 ರಿಂದ ಬೆಳಿಗ್ಗೆ 1 ಗಂಟೆಯ ನಡುವೆ ಅವರ ಮನೆಯಲ್ಲಿರುವ ಸಿಸಿಟಿವಿ ಪರಿಶೀಲಿಸಲು ಕರೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯಿದ್ದಲ್ಲಿ ಪೊಲೀಸ್ ಘಟಕಕ್ಕೆ ಕರೆ ಮಾಡುವಂತೆ ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ದುಷ್ಕರ್ಮಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ. ಭಾರತೀಯ ಪರಂಪರೆಯ ಪ್ರತೀಕವಾದ ಗೌರಿ ಶಂಕರ ಮಂದಿರವನ್ನು ಭಾರತ ವಿರೋಧಿ ಗೀಚುಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಕಾನ್ಸುಲೇಟ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಕೆನಡಾದ ಅಧಿಕಾರಿಗಳೊಂದಿಗೆ ನಾವು ಈ ವಿಷಯದ ಬಗ್ಗೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ ಎಂದರು.