ಹೊಸದಿಗಂತ ವರದಿ ಮದ್ದೂರು:
ಹಿಂದುತ್ವ ಮತ್ತು ಬ್ರಾಹ್ಮಣತ್ವ ಬೇರೆಯಲ್ಲ, ವಿಶಾಲವಾದ ಹಿಂದುತ್ವದ ಅಡಿಯಲ್ಲೇ ಬ್ರಾಹ್ಮಣತ್ವ ಅಡಗಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶನಿವಾರ ಹೇಳಿದರು.
ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪುರಾಣ ಪ್ರಸಿದ್ಧ ಹೊಳೇ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಹಿಂದುತ್ವದ ದೃಷ್ಠಿಕೋನ ಅತ್ಯಂತ ವಿಶಾಲವಾಗಿದೆ. ಬ್ರಾಹ್ಮಣ ಸಮಾಜದ ಅದರಲ್ಲಿ ಒಂದಾಗಿದೆ. ಹೀಗಾಗಿ ಹಿಂದುತ್ವವೂ ಬ್ರಾಹ್ಮಣ ಸಮಾಜದ ಅಡಿಯಲ್ಲೇ ಬರುತ್ತದೆ ಎಂದರು.
ಹಿಂದುತ್ವವು ಜನರ ನಂಬಿಕೆ ಮತ್ತು ಆಚರಣೆಗಳನ್ನು ವಿರೋಸುವುದು ತಪ್ಪು. ಆದರೆ, ನಟ ಚೇತನ್ ಯಾವ ನೆಲೆಯಲ್ಲಿ ಮಾತನಾಡಿದ್ದಾರೋ ಅರ್ಥವಾಗುತ್ತಿಲ್ಲ. ಕೀಳು ಪ್ರಚಾರಕ್ಕಾಗಿ ನಟ ಚೇತನ್ ಈ ರೀತಿಯಾದ ಹೇಳಿಕೆ ನೀಡಿರುವುದು ತಪ್ಪು ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಪುರಾಣ ಪ್ರಸಿದ್ಧವಾದ ಹೊಳೇ ಆಂಜನೇಯಸ್ವಾಮಿ ದೇಗುಲ ತನ್ನದೇ ಆದ ಇತಿಹಾಸ ಹೊಂದಿದೆ. ದೇಗುಲದ ಮುಂಭಾಗ ನಿರ್ಮಿಸಿರುವ ಮಧ್ವವನ ಭಾರೀ ಮಳೆಯಿಂದಾಗಿ ಶಿಂಷಾನದಿಯಲ್ಲಿ ಉಂಟಾದ ಜಲಪ್ರಳಯದಲ್ಲಿ ಕುಸಿದುಬಿದ್ದಿದೆ. ಸರ್ಕಾರ ವಿಶೇಷ ಅನುದಾನದ ಮೂಲಕ ಮಧ್ವವನವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಪೇಜಾವರ ಶ್ರೀಗಳು ಮನವಿ ಮಾಡಿದರು.
ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್, ಸಹಾಯಕ ಅರ್ಚಕ ಸುರೇಶಾಚಾರ‌್, ಹಿರಿಯ ಅರ್ಚಕ ಕೃಷ್ಣಾಚಾರ್ ಇದ್ದರು.