ಹಿಂದುತ್ವ ಇಂದು ವಿದೇಶಿಗರಲ್ಲಿಯೂ ಭಾರತೀಯ ವ್ಯಾಮೋಹ ಬಿತ್ತಿದೆ: ವಿನಾಯಕ ಭಟ್

ಹೊಸದಿಗಂತ ವರದಿ, ಬೆಂಗಳೂರು:

ವೈಚಾರಿಕ ವಿರೋಧಿಗಳು ವಿಶ್ವಮಟ್ಟದಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಬಿಂಬಿಸಿದರೂ ವಾಸ್ತವ ಏನು ಎಂಬುದು ಮಾತ್ರ ಎಲ್ಲರಿಗೂ ಸ್ಪಷ್ಟವಿದೆ ಎಂದು ಹೊಸ ದಿಗಂತ ಪತ್ರಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮುರೂರು ಹೇಳಿದರು.

ನಗರದ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಮೂರನೇ ಯಂಗ್ ಥಿಂಕರ್ಸ್ ಮೀಟ್ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ ಅವರು, ಸಾಂಸ್ಕೃತಿಕ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಕುರಿತು ಮಾತನಾಡಿದರು.
ಹಿಂದುತ್ವದಲ್ಲಿ ಮುಕ್ತ ವಾತಾವರಣವಿದೆ. ಪೂಜಾ ಪದ್ಧತಿ, ನಂಬಿಕೆಗಳಿಗೆ ಇಲ್ಲಿ ಯಾವುದೇ ಇತಿಮಿತಿಗಳಿಲ್ಲ. ಅದಕ್ಕಾಗಿ ಹಿಂದು ಧರ್ಮ ಬಲಿಷ್ಠವಾಗಿದೆ. ಹಿಂದುತ್ವ – ರಾಷ್ಟ್ರೀಯತೆ ಎಂಬುದು ಬೇರೆ ಬೇರೆ ಅಲ್ಲ. ಅವೆಲ್ಲ ನಮಗೆ ರಕ್ತಗತವಾಗಿದೆ ಎಂದ ಅವರು, ದೇಶ ಹಾಗೂ ಧರ್ಮ ವಿಸ್ತರಣೆಯಲ್ಲಿ ಭಾರತ ಎಂದಿಗೂ ಯಾರ ಮೇಲೂ ಆಕ್ರಮಣ ಮಾಡಿಲ್ಲ. ಯಾರು ನಮ್ಮನ್ನು ಒಪ್ಪಿಕೊಂಡು ಬರುತ್ತಾರೋ ಅವರನ್ನೆಲ್ಲ ನಾವು ಸೇರಿಸಿಕೊಂಡಿದ್ದೇವೆ ಎಂದರು.

ಅನೇಕ ವಿದೇಶಿಗರು ಜ್ಞಾನಾರ್ಜನೆ ಉದ್ದೇಶದಿಂದ ನಿರಂತರವಾಗಿ ಭಾರತಕ್ಕೆ ಬರುತ್ತಿದ್ದಾರೆ. ಇಂದು ಹಿಂದುತ್ವದ ಕುರಿತು ವಿಶ್ವಮಟ್ಟದಲ್ಲಿ ಬಹು ಚರ್ಚೆಗೊಳಗಾಗುತ್ತಿದೆ. ಮೊದಲೆಲ್ಲ ವಿದೇಶಿ ನಿರ್ಮಿತ ವಸ್ತುಗಳಿಗೆ ನಾವು ವ್ಯಾಮೋಹಪಡುತ್ತಿದ್ದೆವು ಆದರೆ ಈಗ ಭಾರತದ ವಸ್ತುಗಳಿಗೆ ವಿದೇಶಿಗರು ವ್ಯಾಮೋಹಪಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಗಿರೀಶ ಭಾರದ್ವಾಜ ಮಾತನಾಡಿ, ಭಾರತ-ಹಿಂದುತ್ವ ಎರಡೂ ಒಂದೇ. ಪ್ರಪಂಚದ ಉಳಿದ ನಾಗರಿಕತೆಗಳು ನಶಿಸಿರುವಾಗ ಭಾರತದ ನಾಗರಿಕತೆ ಮಾತ್ರ ಉಳಿದಿದೆ ಎಂದರೆ ಇದಕ್ಕೆ ಕಾರಣ ಹಿಂದುತ್ವ. ಯಾವ ದೇಶದ ಮೇಲೂ ದಾಳಿ ಮಾಡದ ದೇಶ ಎಂದರೆ ಅದು ಭಾರತ ಮಾತ್ರ. ಭೌಗೋಳಿಕವಾಗಿ ಕೆಲವು ಪ್ರದೇಶಗಳು ಭಾರತದಲ್ಲಿ ಇಲ್ಲದೇ ಹೋದರೂ ಸಾಂಸ್ಕೃತಿಕವಾಗಿ ಅದು ನಮ್ಮದೇ ಎಂದು ನಾವು ಭಾವಿಸಿದ್ದೇವೆ. ಈ ರಾಷ್ಟ್ರದ ಅಸ್ಮಿತೆಯೆ ಹಿಂದೂ ರಾಷ್ಟ್ರೀಯತೆ. ಭಾರತ ಯಾವಾಗಲೂ ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುತ್ತದೆ ಎಂದು ಹೇಳಿದರು.

ಯುವ ವಾಗ್ಮಿ ಸ್ಪೂರ್ತಿ ಮುರಳಿಧರ ಮಾತನಾಡಿ, ಶಂಕರಾಚಾರ್ಯರು, ಶಿವಾಜಿ, ವಿವೇಕಾನಂದ ಮುಂತಾದ ಮಹನೀಯರ ಕಾಲದಲ್ಲಿ ಹಿಂದುತ್ವದ ಪರವಾಗಿ ಧ್ವನಿಗಳು ಕೇಳಿಬಂದವು. ಹಿಂದುತ್ವ ಸದಾ ಉಚ್ಛ ಸ್ಥಾನದಲ್ಲಿದೆ. ಹಿಂದುತ್ವವೆಂದರೆ ಬಂಧುತ್ವ. ವಿಶ್ವದ ಬೇರೆ ದೇಶಗಳನ್ನು ವಿವಿಧ ಗುಣಾಧಾರದ ಮೇಲೆ ಗುರುತಿಸಿದರೆ ಭಾರತವನ್ನು ಸಂಸ್ಕೃತಿ, ಸಂಸ್ಕಾರದ ಆಧಾರದ ಮೇಲೆ ಗುರುತಿಸಲಾಗುತ್ತದೆ ಎಂದರು.
ಪತ್ರಕರ್ತ ನಿಖಿಲ ಜೋಶಿ ಚರ್ಚಾಗೋಷ್ಠಿ ನಿರ್ವಹಿಸಿದರು. ಪ್ರಾಂತ ಪ್ರಚಾರ ಪ್ರಮುಖ ರಾಜೇಶ ಪದ್ಮಾರ ಇತರರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!