ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ರಜೆಯ ಸಂಭ್ರಮದಲ್ಲಿ ಊರಿಗೆ ತೆರಳುತ್ತಿದ್ದ ಪ್ರಯಾಣಿಕರ ಪಾಲಿಗೆ ಸೀಬರ್ಡ್ ಬಸ್ ಮೃತ್ಯುಪಾಶವಾಗಿ ಪರಿಣಮಿಸಿದ ಘಟನೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಹಿರಿಯೂರು ಬಳಿಯ ಗೊರ್ಲಡಕು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಟ್ಟು ಕರಕಲಾಗಿದ್ದ ಐವರು ಪ್ರಯಾಣಿಕರ ಗುರುತು ಪತ್ತೆಯಾಗಿದ್ದು, ಡಿಎನ್‌ಎ ವರದಿ ಬಂದ ಬೆನ್ನಲ್ಲೇ ಪೊಲೀಸರು ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಚನ್ನರಾಯಪಟ್ಟಣದ ಮಾನಸ ಮತ್ತು ನವ್ಯ ಅವರ ಕಥೆ ಎದೆಯುಬ್ಬಿಸುವಂತಿದೆ. ಬಾಲ್ಯದಿಂದಲೂ ಜೊತೆಯಾಗಿ ಬೆಳೆದು, ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿದ್ದ ಈ ಗೆಳತಿಯರು ಮುಂದಿನ ಸುಂದರ ಬದುಕಿನ ಕನಸು ಕಂಡಿದ್ದರು. ಆದರೆ ವಿಧಿ ಅವರನ್ನು ಒಟ್ಟಿಗೇ ಕರೆದೊಯ್ದಿದೆ. “ಇಂತಹ ಸಾವು ಶತ್ರುಗಳಿಗೂ ಬರಬಾರದು, ಒಟ್ಟಿಗೆ ಬೆಳೆದವರ ಅಂತ್ಯಕ್ರಿಯೆಯನ್ನು ಒಂದೇ ಕಡೆ ನೆರವೇರಿಸುತ್ತೇವೆ” ಎಂದು ನವ್ಯ ಅವರ ತಂದೆ ಕಣ್ಣೀರು ಹಾಕಿದ್ದಾರೆ.
ಅಪಘಾತದ ತೀವ್ರತೆಗೆ ಮೃತದೇಹಗಳು ಗುರುತು ಸಿಗದಂತೆ ಸುಟ್ಟು ಹೋಗಿದ್ದವು. ಪೊಲೀಸರು ಮೃತದೇಹಗಳ ಮೇಲಿದ್ದ ಆಭರಣಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸಿದ್ದಾರೆ. “ಇಂತಹ ಘಟನೆಗಳು ಮರುಕಳಿಸಬಾರದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಹೊರಬರಬೇಕು” ಎಂದು ಸಂತ್ರಸ್ತರ ಕುಟುಂಬದವರು ಆಗ್ರಹಿಸಿದ್ದಾರೆ.

