ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಜೈಲಿನಿಂದಲೇಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ತನ್ನ ತಾಯಿ ಬಲ್ವಿಂದರ್ ಕೌರ್ ಹೇಳಿದ್ದ ತಾನು ಖಲಿಸ್ತಾನಿ ಬೆಂಬಲಿಗನಲ್ಲ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾನೆ.
ಶುಕ್ರವಾರ ಬಲ್ವಿಂದರ್ ಕೌರ್ ತನ್ನ ಮಗ (ಅಮೃತ್‌ಪಾಲ್) ಖಲಿಸ್ತಾನಿ ಬೆಂಬಲಿಗನಲ್ಲ ಎಂದು ಹೇಳಿದ್ದರು. ಇದನ್ನು ನಿರಾಕರಿಸಿರುವ ಅಮೃತ್‌ಪಾಲ್, ತನ್ನ ತಾಯಿಯನ್ನು ಟೀಕಿಸಿ, ಖಾಲ್ಸಾ ರಾಜ್ ಕನಸು ಕಾಣುವುದು ಅಪರಾಧವಲ್ಲ, ಅದು ಹೆಮ್ಮೆಯ ವಿಷಯ ಎಂದು ತಿರುಗೇಟು ನೀಡಿದ್ದಾನೆ. ಜತೆಗೆ ಪಂತ್ (ಧರ್ಮ) ಮತ್ತು ಕುಟುಂಬ ಎಂಬ ಎರಡು ಆಯ್ಕೆಯ ಪೈಕಿ ತನ್ನ ಆದ್ಯತೆ ಯಾವತ್ತಿದ್ದರೂ ಧರ್ಮವೇ ಆಗಿರುತ್ತದೆ ಎಂದು ಹೇಳಿದ್ದಾನೆ.
ದೆಹಲಿಯಲ್ಲಿ ತಮ್ಮ ಮಗ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಲ್ವಿಂದರ್ ಕೌರ್, ʼ’ಅಮೃತ್‌ಪಾಲ್ ಖಲಿಸ್ತಾನಿ ಬೆಂಬಲಿಗನಲ್ಲ. ಹೀಗಾಗಿ ಆತನನ್ನು ಜೈಲಿನಿಂದ ತಕ್ಷಣವೇ ಬಿಡುಗಡೆ ಮಾಡಬೇಕು. ಆತ ಪಂಜಾಬ್ ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ ಮತ್ತು ಪಂಜಾಬ್‌ನ ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸುವ ಬಗ್ಗೆ ಒಲವು ಹೊಂದಿದ್ದಾನೆ. ಇಂತಹವರು ಹೇಗೆ ತಾನೆ ಖಲಿಸ್ತಾನದ ಬೆಂಬಲಿಗರಾಗುತ್ತಾರೆ? ಆತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಈಗ ಪ್ರಮಾಣ ವಚನ ಸ್ವೀಕರಿಸಿದ್ದಾನೆ. ಆತ ಪಂಜಾಬ್‌ಗಾಗಿ ಧ್ವನಿ ಎತ್ತಲಿದ್ದಾನೆ’ ಎಂದು ತಿಳಿಸಿದ್ದರು.
ಅಮೃತ್‌ಪಾಲ್ ಹೇಳಿದ್ದೇನು?
ಇದಕ್ಕೆ ತಿರುಗೇಟು ನೀಡಿರುವ ಅಮೃತ್‌ಪಾಲ್ ಸಿಂಗ್,’ನಿನ್ನೆ ಮಾತಾಜಿ ನೀಡಿದ ಹೇಳಿಕೆಯಿಂದ ನನಗೆ ತುಂಬಾ ದುಃಖವಾಯಿತು. ಮಾತಾಜಿ ತಿಳಿಯದೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅಂತಹ ಹೇಳಿಕೆ ನನ್ನ ಕುಟುಂಬದಿಂದ ಅಥವಾ ನನ್ನನ್ನು ಬೆಂಬಲಿಸುವ ಯಾರಿಂದಲೂ ಬರಬಾರದು. ಖಾಲ್ಸಾ ರಾಜ್ ಕನಸು ಕಾಣುವುದು ಅಪರಾಧವಲ್ಲ, ಅದು ಹೆಮ್ಮೆಯ ವಿಷಯ. ಲಕ್ಷಾಂತರ ಸಿಖರು ತಮ್ಮ ಪ್ರಾಣ ತ್ಯಾಗ ಮಾಡಿದ ಈ ಮಾರ್ಗದಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಮುಂದೆ ಕುಟುಂಬ ಮತ್ತು ಧರ್ಮದ ಆಯ್ಕೆ ಇಟ್ಟರೆ ನಾನು ಧರ್ಮವನ್ನೇ ಆರಿಸುತ್ತೇನೆ. ಭವಿಷ್ಯದಲ್ಲಿ ಸಂವಹನ ನಡೆಸುವಾಗ ಇಂತಹ ನಿರ್ಲಕ್ಷ್ಯ ಮತ್ತೆ ಸಂಭವಿಸಬಾರದು’ ಎಂದು ಹೇಳಿದ್ದಾನೆ.
ಬಲ್ವಿಂದರ್ ಕೌರ್ ಅವರ ಹೇಳಿಕೆಯು ಚುನಾವಣೆಯಲ್ಲಿ ಅಮೃತ್‌ಪಾಲ್ ಸಿಂಗ್‌ಗೆ ಮತ ಚಲಾಯಿಸಿದ ಖಲಿಸ್ತಾನಿ ಪರ ಬೆಂಬಲಿಗರನ್ನು ಕೆರಳಿಸಿದೆ. ಇದರಿಂದ ಎಚ್ಚೆತ್ತ ಬಲ್ವಿಂದರ್ ಕೌರ್ ಮಾಧ್ಯಮಗಳ ಮೇಲೆ ತಪ್ಪು ಹೊರಿಸಿದ್ದಾರೆ. ತನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ನಿರೂಪಿಸುತ್ತಿವೆ ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ.
ನಾವು ಸಂವಿಧಾನದ ಪ್ರಕಾರ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ನಾನು ಹೇಳಿದ್ದೆ. ಖಲಿಸ್ತಾನದ ಬಗ್ಗೆ ಕೇಳುವ ಮೂಲಕ ಮಾಧ್ಯಮಗಳು ನನ್ನ ದಾರಿ ತಪ್ಪಿಸಿವೆ. ಮಾಧ್ಯಮಗಳು ಸತ್ಯಗಳನ್ನು ತಪ್ಪಾಗಿ ನಿರೂಪಿಸುವ ಅಭ್ಯಾಸವನ್ನು ಹೊಂದಿರುವುದರಿಂದ ಬೆಂಬಲಿಗರು ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಬಾರದು ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದಾರೆ.