ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತಿಹಾಸ ಪ್ರಸಿದ್ದ ಶ್ರೀ ಧರ್ಮರಾಯಸ್ವಾಮಿ ಬೆಂಗಳೂರು ಕರಗದ ಉತ್ಸವ ಇಂದು, ನಾಳೆ ನಡೆಯಲಿದೆ. ಕರಗದ ಉತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಠಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿದೆ.
ನಗರದ ಕೇಂದ್ರ ಭಾಗದಲ್ಲಿರುವ ತಿಗಳರಪೇಟೆಯಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವದ ಆಚರಣೆ ನಡೆಯುತ್ತಿದೆ. ಈ ಕಾರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಂಗಳೂರು ಕರಗೋತ್ಸವ ಇರುವುದರಿಂದ ಎರಡು ದಿನಗಳ ಕಾಲ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗದ ಆಚರಣೆಗಳು ನಡೆಯುವುದರಿಂದ ಏಪ್ರಿಲ್ 12ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13ರ ಸಂಜೆ 6 ಗಂಟೆಯವರೆಗೆ ಅವೆನ್ಯೂ ರಸ್ತೆ, ಕೆಆರ್ ಮಾರ್ಕೆಟ್ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್‌ಪೇಟ್, ಕೆ.ಜಿ.ರಸ್ತೆ, ಚಿಕ್ಕಪೇಟೆ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡುವುದರಿಂದ ಆ ಸಮಯದಲ್ಲೂ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.ವಾಹನ ಸವಾರರು ಈ ದಿನಗಳಂದು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.
ಮಾರ್ಕೆಟ್ ವೃತ್ತದಿಂದ ಕೆ.ಜಿ.ರಸ್ತೆ, ಆನಂದ್‌ರಾವ್ ಸರ್ಕಲ್ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸಬಹುದು. ಎಎಸ್ ಚಾರ್ ಸ್ಟ್ರೀಟ್‌ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವಾ ಸರ್ಕಲ್ ಮತ್ತು ಜೆಸಿ ರಸ್ತೆ ಮೂಲಕ ಟೌನ್‌ಹಾಲ್ ಕಡೆಗೆ ಚಲಿಸಬಹುದು. ಶಾಂತಲಾ ಜಂಕ್ಷನ್‌ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್, ಟ್ಯಾಂಕ್‌ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ತೆರಳಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.