February 11, 2026
Wednesday, February 11, 2026
spot_img

Historical | ಅಳಿವು-ಉಳಿವಿನ ಆಟದಲ್ಲಿ ಗೆದ್ದ ಭಕ್ತಿ: ಇದು ಭಾರತದ ಮೊದಲ ಜ್ಯೋತಿರ್ಲಿಂಗದ ಪುನರುತ್ಥಾನದ ಗಾಥೆ!

ಪುರಾಣಗಳ ಪ್ರಕಾರ, ದಕ್ಷ ಬ್ರಹ್ಮನಿಗೆ 27 ಮಂದಿ ಪುತ್ರಿಯರಿದ್ದರು (ನಕ್ಷತ್ರಗಳು). ಅವರೆಲ್ಲರನ್ನೂ ಚಂದ್ರನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಚಂದ್ರನು ತನ್ನ ಎಲ್ಲಾ ಪತ್ನಿಯರಿಗಿಂತ ರೋಹಿಣಿಯನ್ನು ಮಾತ್ರ ಅತಿಯಾಗಿ ಪ್ರೀತಿಸುತ್ತಿದ್ದನು. ಇದರಿಂದ ನೊಂದ ಉಳಿದ 26 ಪತ್ನಿಯರು ತಂದೆ ದಕ್ಷನಲ್ಲಿ ದೂರು ನೀಡಿದರು.

ಕೋಪಗೊಂಡ ದಕ್ಷ ಬ್ರಹ್ಮನು, “ನಿನ್ನ ಕಾಂತಿಯು ಕ್ಷೀಣಿಸಲಿ” ಎಂದು ಚಂದ್ರನಿಗೆ ಶಾಪ ನೀಡಿದನು. ಶಾಪದ ಪ್ರಭಾವದಿಂದ ಚಂದ್ರನು ತನ್ನ ತೇಜಸ್ಸನ್ನು ಕಳೆದುಕೊಂಡು ಕೃಶವಾಗತೊಡಗಿದಾಗ. ಶಾಪ ವಿಮೋಚನೆಗಾಗಿ ಬ್ರಹ್ಮನ ಸಲಹೆಯಂತೆ ಚಂದ್ರನು ಸೌರಾಷ್ಟ್ರದ ಸಮುದ್ರತೀರದಲ್ಲಿ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದನು.

ಚಂದ್ರನ ಭಕ್ತಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ, ಸಂಪೂರ್ಣ ಶಾಪ ವಿಮೋಚನೆ ಸಾಧ್ಯವಿಲ್ಲದಿದ್ದರೂ, “ಒಂದು ಪಕ್ಷದಲ್ಲಿ ನಿನ್ನ ಕಲೆ ಕ್ಷೀಣಿಸಿದರೆ, ಇನ್ನೊಂದು ಪಕ್ಷದಲ್ಲಿ ನಿನ್ನ ಕಾಂತಿ ವೃದ್ಧಿಯಾಗಲಿ” ಎಂದು ವರ ನೀಡಿದನು (ಅಮಾವಾಸ್ಯೆ ಮತ್ತು ಪೂರ್ಣಿಮೆ). ಚಂದ್ರನ ಕೋರಿಕೆಯಂತೆ ಶಿವನು ಅಲ್ಲಿ ‘ಸೋಮನಾಥ’ ಎಂಬ ಹೆಸರಿನಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿದನು.

ಇತಿಹಾಸದ ಪ್ರಕಾರ, ಈ ದೇಗುಲವನ್ನು ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ:

ಸತ್ಯಯುಗ: ಚಂದ್ರನು ಚಿನ್ನದಿಂದ ದೇಗುಲ ನಿರ್ಮಿಸಿದನು.

ತ್ರೇತಾಯುಗ: ರಾವಣನು ಬೆಳ್ಳಿಯಿಂದ ನಿರ್ಮಿಸಿದನು.

ದ್ವಾಪರಯುಗ: ಶ್ರೀಕೃಷ್ಣನು ಶ್ರೀಗಂಧದ ಮರದಿಂದ ನಿರ್ಮಿಸಿದನು.

ಕಲಿಯುಗ: ಭೀಮದೇವ ಮತ್ತು ಇತರ ರಾಜರು ಕಲ್ಲಿನಿಂದ ನಿರ್ಮಿಸಿದರು.

ಸೋಮನಾಥ ದೇಗುಲವು ತನ್ನ ಅಪಾರ ಸಂಪತ್ತಿನಿಂದಾಗಿ ಹಲವಾರು ಬಾರಿ ಪರಕೀಯರ ದಾಳಿಗೆ ಒಳಗಾಯಿತು. ಕ್ರಿ.ಶ. 1024ರಲ್ಲಿ ಮೊಹಮ್ಮದ್ ಗಜ್ನಿ ದೇಗುಲವನ್ನು ಧ್ವಂಸ ಮಾಡಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.

ನಂತರ ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್ ಮುಂತಾದವರು ಈ ದೇಗುಲದ ಮೇಲೆ ದಾಳಿ ಮಾಡಿದರು. ಆದರೆ ಪ್ರತಿ ಬಾರಿ ಧ್ವಂಸವಾದಾಗಲೂ ಭಾರತೀಯ ರಾಜರು ಮತ್ತು ಭಕ್ತರು ಅದನ್ನು ಮತ್ತೆ ಮತ್ತೆ ನಿರ್ಮಿಸಿದರು.

ಪ್ರಸ್ತುತ ನಾವು ನೋಡುತ್ತಿರುವ ಭವ್ಯವಾದ ದೇಗುಲವನ್ನು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಪುನರ್ನಿರ್ಮಿಸಲಾಯಿತು ಮತ್ತು 1951ರಲ್ಲಿ ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಲೋಕಾರ್ಪಣೆ ಮಾಡಿದರು.

ಸೋಮನಾಥ ದೇವಾಲಯವು ಸನಾತನ ಧರ್ಮದ ಅಜೇಯ ಶಕ್ತಿಯ ಸಂಕೇತವಾಗಿದೆ. ಕ್ಷಯಿಸುತ್ತಿದ್ದ ಚಂದ್ರನಿಗೆ ಜೀವದಾನ ನೀಡಿದ ಶಿವನು ಇಲ್ಲಿ ಜ್ಯೋತಿರ್ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಕಾಲದ ಹೊಡೆತಕ್ಕೆ ಸಿಲುಕಿ ಹಲವು ಬಾರಿ ವಿದೇಶಿ ಆಕ್ರಮಣಕಾರರಿಂದ ಈ ದೇವಾಲಯ ಧ್ವಂಸಗೊಂಡಿದ್ದರೂ, ಪ್ರತಿ ಬಾರಿ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ. ಇಂದು ಇದು ಭಾರತದ ಸಾಂಸ್ಕೃತಿಕ ಹೆಮ್ಮೆಯಾಗಿ ಗುಜರಾತಿನ ಕರಾವಳಿಯಲ್ಲಿ ರಾರಾಜಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !