ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆವು ಅದ್ದೂರಿಯಾಗಿ ನಡೆದಿತ್ತು. ಇದಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಸ್‌ಪಿ (SP) ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಇದರಿಂದ ಬೇಸರಕೊಂಡ ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ನಟ ಸುನಿಲ್ ಲಹರಿ ಬಿಜೆಪಿ ಸೋತಿರುವ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ʻʻಅಯೋಧ್ಯೆಯ ಪ್ರಜೆಗಳು ಯಾವಾಗಲೂ ತಮ್ಮ ರಾಜನಿಗೆ ದ್ರೋಹ ಬಗೆಯುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆʼʼ ಎಂದುಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ದೃಶ್ಯದ ಚಿತ್ರವನ್ನು ಸುನಿಲ್ ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್‌ನಲ್ಲಿ ಅವರು ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪನು ಅಮರೇಂದ್ರ ಬಾಹುಬಲಿಗೆ ಹಿಂಭಾಗದಿಂದ ಕತ್ತಿಯನ್ನು ಇರಿಯುತ್ತಿರುವ ದೃಶ್ಯ ಇದೆ. ಇದರಲ್ಲಿ ಕಟ್ಟಪ್ಪನ್ನು ಅಯೋಧ್ಯೆ ಎಂದು ಕರೆದರೆ, ಬಾಹುಬಲಿ ಪ್ರಭಾಸ್ ಅವರನ್ನು ಬಿಜೆಪಿ ಎಂದು ಕರೆದಿದ್ದಾರೆ.
ʻʻವನವಾಸದಿಂದ ಹಿಂದಿರುಗಿದ ನಂತರ ಸೀತಾದೇವಿಯನ್ನು ಅನುಮಾನಿಸಿದ ಅಯೋಧ್ಯೆಯ ಪ್ರಜೆಗಳು ಇವರೇ ಎಂಬುದನ್ನು ನಾವು ಮರೆಯುತ್ತಿದ್ದೇವೆ. ದೇವರನ್ನು ನಿರಾಕರಿಸುವ ವ್ಯಕ್ತಿಯನ್ನು ನೀವು ಏನೆಂದು ಕರೆಯುತ್ತೀರಿ? ಸ್ವಾರ್ಥಿ. ಅಯೋಧ್ಯೆಯ ಪ್ರಜೆಗಳು ಯಾವಾಗಲೂ ತಮ್ಮ ರಾಜನಿಗೆ ದ್ರೋಹ ಬಗೆದಿದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅವರಿಗೆ ನಾಚಿಕೆಯಾಗಬೇಕುʼʼ ಎಂದು ಬರೆದುಕೊಂಡಿದ್ದಾರೆ.
‘ಅಯೋಧ್ಯೆಯ ಪ್ರಿಯ ನಾಗರಿಕರೇ, ಸೀತಾ ದೇವಿಯನ್ನು ಸಹ ಬಿಡದ ನಿಮ್ಮ ಶ್ರೇಷ್ಠತೆಗೆ ನಾವು ನಮಸ್ಕರಿಸುತ್ತೇವೆ. ಶ್ರೀರಾಮನು ಆ ಚಿಕ್ಕ ಗುಡಿಸಲಿನಿಂದ ಹೊರಬಂದು ಸುಂದರವಾದ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಡುವಂತೆ ಮಾಡಿದ ವ್ಯಕ್ತಿಗೆ ನೀವು ದ್ರೋಹ ಮಾಡಿದಿರಿ. ಇಡೀ ರಾಷ್ಟ್ರವು ನಿಮ್ಮನ್ನು ಮತ್ತೆ ಗೌರವದಿಂದ ನೋಡುವುದಿಲ್ಲ’ ಎಂದೂ ಬರೆದುಕೊಂಡಿದ್ದಾರೆ.
ಜನವರಿಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ, ಇಡೀ ಭಾರತದಲ್ಲಿಯೇ ಬಿಜೆಪಿಯ ಪುನಃ ಪ್ರತಿಷ್ಠಾಪನೆಗೆ ಮೂಲವಾಗಲಿದೆ ಎಂದು ಭಾವಿಸಲಾಗಿತ್ತು. ಕಡೇ ಪಕ್ಷ ಉತ್ತರ ಪ್ರದೇಶದಲ್ಲಾದರೂ ಭಾರಿ ಮೆಜಾರಿಟಿಯಲ್ಲಿ ಬಿಜೆಪಿ ಬರಲಿದೆ ಎಂದು ತರ್ಕಿಸಲಾಗಿತ್ತು. ಆದರೆ ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ.