ಹೊಸದಿಗಂತ ವರದಿ, ಕುಶಾಲನಗರ:
ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಫೆ. 6 ರಂದು ನಡೆದಿದ್ದ ಮೂಲ್ಕಿಯ ಫೆಲಿಕ್ಸ್ ಡಿಸೋಜಾ ಎಂಬವರ ಸಾವಿಗೆ ಸಂಬಂಧಿಸಿದಂತೆ ಶನಿವಾರಸಂತೆ ಸಮೀಪದ ಹುಲುಸೆ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಶನಿವಾರಸಂತೆ ಸಮೀಪ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ರಜಾಕ್ .ಎಂ.ಎಂ (35) ಎಂದು ಗುರುತಿಸಲಾಗಿದೆ.
ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಫೆ.6 ಬೆಳಗ್ಗೆ 6.30 ಘಂಟೆಗೆ ಒಂದು ಗಂಡಸಿನ ಶವ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು, ಸೀನ್ ಆಫ್ ಕ್ರೈಂ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿತ್ತು. ಮೃತ ವ್ಯಕ್ತಿಯು ಅಪಘಾತದಿಂದ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದು, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮೃತ ವ್ಯಕ್ತಿಯು ಮುಲ್ಕಿ ಮೂಲದ ಫೆಲಿಕ್ಸ್ ಡಿಸೋಜ ಎಂದು ತಿಳಿದಿದ್ದು, ಅದೇ ದಿನ ಮೃತರ ಸಂಬಂಧಿಕರನ್ನು ಸಂಪರ್ಕಿಸಿ ಮೃತ ದೇಹವನ್ನು ಹಸ್ತಾಂತರಿಸಲಾಗಿತ್ತು.
ಪಾದಚಾರಿಗೆ ಅಪಘಾತಗೊಳಿಸಿ ವಾಹನವನ್ನು ನಿಲ್ಲಿಸದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್.ಬಿ.ಜಿ ಹಾಗೂ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತಂಡ ತನಿಖೆಯನ್ನು ಕೈಗೊಂಡು ಮಾಹಿತಿ ಸಂಗ್ರಹಿಸಿ ಫೆ.16ರಂದು ಶನಿವಾರಸಂತೆ ಸಮೀಪದ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ಎಂ.ಎಂ.ರಜಾಕ್’ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹಾಗೂ ಅಪಘಾತಗೊಳಿಸಿದ ಕೆಎ-51- ಎಂಪಿ-8173 ಕಿಯಾ ಸೆಲ್ಟೋಸ್ ಕಾರನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.