January17, 2026
Saturday, January 17, 2026
spot_img

ಸಿಡ್ನಿಯಲ್ಲಿ ಮೈದಾನದಲ್ಲಿ ಹಿಟ್ ಮ್ಯಾನ್ ಹವಾ: ರೋಹಿತ್ ಮುಡಿಗೆ ದಾಖಲೆಗಳ ಕಿರೀಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಮಾಜಿ ನಾಯಕ ರೋಹಿತ್‌ ಶರ್ಮ ಅವರು ಭರ್ಜರಿ ಬ್ಯಾಟಿಂಗ್ ನಡೆಸಿದ್ದು,
ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ 2,500 ಏಕದಿನ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 71 ಪಂದ್ಯಗಳಲ್ಲಿ ಒಂಬತ್ತು ಶತಕ ಮತ್ತು 15 ಅರ್ಧಶತಕ ಸೇರಿದಂತೆ 3,077 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಕೇವಲ 49 ನೇ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.

ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.ತಮ್ಮ ಏಕದಿನ ವೃತ್ತಿಜೀವನದ 33 ನೇ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ. ಅಂದರೆ ರೋಹಿತ್ ಶರ್ಮಾ ಇದುವರೆಗೆ 50 ಶತಕಗಳನ್ನು ಬಾರಿಸಿದ್ದಾರೆ.

ಆಸೀಸ್ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ನೆಲದಲ್ಲಿ ರೋಹಿತ್ ಇದುವರೆಗೆ ಆರನೇ ಶತಕ ಬಾರಿಸಿದ್ದಾರೆ. ಈ ಮೂಲಕ ಐದು ಶತಕಗಳನ್ನು ಬಾರಿಸಿದ್ದ ಕೊಹ್ಲಿ ಮತ್ತು ಸಂಗಕ್ಕಾರ ಅವರನ್ನು ಹಿಂದಿಕ್ಕಿದರು.

ಜೊತೆಗೆ ರೋಹಿತ್ ಏಕದಿನ ಪಂದ್ಯಗಳಲ್ಲಿ 100 ಕ್ಯಾಚ್‌ಗಳನ್ನು ಪಡೆದ 6ನೇಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ (163), ಮೊಹಮ್ಮದ್ ಅಜರುದ್ದೀನ್ (156), ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124), ಮತ್ತು ಸುರೇಶ್ ರೈನಾ (102) ಮೊದಲ ಐವರು.

ಏಕದಿನ ಕ್ರಿಕೆಟ್‌ನಲ್ಲಿ ಸಿಡ್ನಿಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿ ಏಷ್ಯಾದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ರೋಹಿತ್‌ ಪಾಲಾಯಿತು. ಒಂದು ಸಿಕ್ಸರ್‌ ಬಾರಿಸುವ ಮೂಲಕ ಅವರು ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಜಯಸೂರ್ಯ ಜತೆ ಜಂಟಿ ದಾಖಲೆ ಹೊಂದಿದ್ದರು. ಸದ್ಯ ರೋಹಿತ್‌ 10 ಸಿಕ್ಸರ್‌ ಬಾರಿಸಿದ್ದಾರೆ.

Must Read

error: Content is protected !!