January16, 2026
Friday, January 16, 2026
spot_img

2027 ವಿಶ್ವಕಪ್‌ಗಾಗಿ BCCI ನಿಂದ ಹಿಟ್‌ಮ್ಯಾನ್-ಕಿಂಗ್‌ಗೆ ‘ಅಗ್ನಿಪರೀಕ್ಷೆ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ಗಳು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ತಮ್ಮ ಅದ್ಭುತ ವೃತ್ತಿಜೀವನದ ಅಂತಿಮ ಘಟ್ಟಕ್ಕೆ ಬರುತ್ತಿದ್ದಾರೆ. ವಿಶ್ವದ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಬಹುಕಾಲ ಮಿಂಚಿದ ಈ ‘ರೋ-ಕೊ’ ಜೋಡಿ, 2027ರ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮುಗಿದ ಕೂಡಲೇ ಇಬ್ಬರೂ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ, ಈ ತಾರಾ ಜೋಡಿಯ ಮುಂದಿನ ಭವಿಷ್ಯದ ಕುರಿತು ನಿರ್ಣಯ ಕೈಗೊಳ್ಳಲು ಬಿಸಿಸಿಐ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಹತ್ವದ ಸಭೆ ನಡೆಸಲು ನಿರ್ಧರಿಸಿದೆ.

ವರದಿಗಳ ಪ್ರಕಾರ, ಬಿಸಿಸಿಐ ಉನ್ನತ ಅಧಿಕಾರಿಗಳು, ಮುಖ್ಯಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವೆ ಅಹಮದಾಬಾದ್‌ನಲ್ಲಿ ಒಂದು ಮಹತ್ವದ ಸಭೆ ನಡೆಯಲಿದೆ. ಇದು ಮುಂದಿನ ವಾರ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದ ನಂತರ ನಡೆಯುವ ಸಾಧ್ಯತೆಯಿದೆ.

ಸದ್ಯ ಏಕದಿನ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರುವ ಈ ದಿಗ್ಗಜರು 2027ರ ವಿಶ್ವಕಪ್‌ಗೆ ಲಭ್ಯರಿರುತ್ತಾರೆಯೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಆದರೆ, ಮೂಲಗಳ ಪ್ರಕಾರ, ಮಂಡಳಿಯು ಈ ಇಬ್ಬರಿಗೂ ಸ್ಪಷ್ಟ ಸೂಚನೆಗಳನ್ನು ನೀಡಿದೆ:

ರೋಹಿತ್ ಶರ್ಮಾ: ಫಿಟ್‌ನೆಸ್ ಅನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದು ಮತ್ತು ಆಟದಲ್ಲಿ ಸ್ಥಿರ ಪ್ರದರ್ಶನ ನೀಡುವುದರ ಮೇಲೆ ಸಂಪೂರ್ಣ ಗಮನ ಹರಿಸುವುದು.

ವಿರಾಟ್ ಕೊಹ್ಲಿ: ಕೇವಲ ಆಟದತ್ತ ಮಾತ್ರ ಗಮನಹರಿಸುವುದು ಮತ್ತು ನಿವೃತ್ತಿ ಸೇರಿದಂತೆ ಯಾವುದೇ ವದಂತಿಗಳಿಗೆ ಕಿವಿಗೊಡದಿರುವುದು.

ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಜೊತೆಗೆ, 2027ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮುಂದಿನ ತಿಂಗಳು ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾ ಸರಣಿ ಮತ್ತು ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಇವರು ನೀಡುವ ಸ್ಥಿರ ಪ್ರದರ್ಶನವನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸಲಿದೆ. ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ, 2027ರ ವಿಶ್ವಕಪ್‌ಗೆ ಈ ತಾರಾ ಜೋಡಿಯನ್ನು ಆಯ್ಕೆ ಮಾಡಬೇಕಾ ಅಥವಾ ಹೊಸ ಆಟಗಾರರಿಗೆ ಅವಕಾಶ ನೀಡಬೇಕಾ ಎಂಬುದರ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Must Read

error: Content is protected !!