ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗೆ ತೆರಳುತ್ತಿದ್ದ ವೃದ್ಧರೋರ್ವರಿಗೆ ಅಪರಿಚಿತ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಮಂಗಳೂರು ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಅಂಬಿಕಾರೋಡ್ ಎಂಬಲ್ಲಿ ನಡೆದಿದ್ದು, ಘಟನೆಯಿಂದ ಎರಡೂ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಅಂಬಿಕಾರೋಡ್ ಬಳಿಯ ಸತ್ಯನಾರಾಯಣ ಕಂಪೌಂಡ್ ನಿವಾಸಿ ದಾಮೋದರ ಪೂಜಾರಿ (72) ಮೃತ ವ್ಯಕ್ತಿ.
ದಾಮೋದರ್ ಅವರು ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿಯಲ್ಲಿರುವ ಕೊರಗಜ್ಜನ ಕಟ್ಟೆಯ ಚಾಕರಿ (ಸೇವೆ) ಕಾರ್ಯ ಮಾಡುತ್ತಿದ್ದರು. ನಿನ್ನೆ ಮಂಗಳವಾರ ರಾತ್ರಿ 7 ಗಂಟೆಗೆ ಕೊರಗಜ್ಜನ ಸಾನಿಧ್ಯದಲ್ಲಿ ದೀಪ ಬೆಳಗಿಸಿ ಮನೆಗೆ ಹಿಂತಿರುಗಲು ಹೆದ್ದಾರಿ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ತಲಪಾಡಿಯಿಂದ ತೊಕ್ಕೊಟ್ಟುವಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಬಿಳಿ ಕಾರೊಂದು ದಾಮೋದರ್ ಅವರಿಗೆ ರಭಸದಿಂದ ಢಿಕ್ಕಿ ಹೊಡೆದು ಕನಿಷ್ಟ ಮಾನವೀಯತೆ ತೋರದೆ ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ದಾಮೋದರ್ ಅವರ ಎರಡು ಕಾಲುಗಳು ಮುರಿತಕ್ಕೊಳಗಾಗಿತ್ತು. ಕೂಡಲೇ ಸ್ಥಳೀಯರು ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ ,ಓರ್ವ ಪುತ್ರ,ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.

ಹೆದ್ದಾರಿ ಅವ್ಯವಸ್ಥೆ ವಿರುದ್ಧ ಆಕ್ರೋಶ
ರಾ.ಹೆ 66 ರ ಕಾಪಿಕಾಡುವಿನಿಂದ ತಲಪಾಡಿಯವರೆಗಿನ ರಸ್ತೆಯಲ್ಲಿ ದಾರಿದೀಪಗಳನ್ನೇ ಅಳವಡಿಸಲಾಗಿಲ್ಲ. ಇದರ ಬಗ್ಗೆ ಕಳೆದ ವಾರ ಸೋಮೇಶ್ವರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನ ಹಿಗ್ಗಾ ಮುಗ್ಗ ತರಾಟೆಗೈದಿದ್ದರು. ರಸ್ತೆಯಲ್ಲಿ ದಾರಿ ದೀಪಗಳು ಇಲ್ಲದೇ ಇರುವ ಪರಿಣಾಮ ಹಿಟ್&ರನ್ ಸಂದರ್ಭಗಳಲ್ಲಿ ಸಿಸಿ ಕ್ಯಾಮೆರಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟ ಸಾಧ್ಯವಾಗಿದೆ. ಹೆದ್ದಾರಿಗೆ ಸಮರ್ಪಕ ಸರ್ವಿಸ್ ರಸ್ತೆಗಳೂ ಇಲ್ಲ. ತೊಕ್ಕೊಟ್ಟುವಿನಿಂದ ತಲಪಾಡಿವರೆಗೂ ಹೆದ್ದಾರಿಯಲ್ಲಿ ಕ್ಯಾಮೆರಗಳನ್ನ ಅಳವಡಿಸಲಾಗಿಲ್ಲ. ರಸ್ತೆಯ ಡಿವೈಡರ್ ಗಳಿಗೆ ತಡೆ ಬೇಲಿಗಳನ್ನ ಅಳವಡಿಸದ ಪರಿಣಾಮ ಜನರು ಹೆದ್ದಾರಿಯನ್ನ ದಾಟಲು ಹೋಗಿ ನಿತ್ಯ ಅಪಘಾತಗಳು ಸಂಭವಿಸುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯನ್ನ ಕೂಡಲೇ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



