ಹಾಕಿ ವಿಶ್ವಕಪ್: ನ್ಯೂಜಿಲೆಂಡ್ ವಿರುದ್ದ ಸೋತ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಾಕಿ ವಿಶ್ವಕಪ್​ನ ಕ್ರಾಸ್​ಓವರ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡವು ಪೆನಾಲ್ಟಿ ಶೂಟೌಟ್​ನಲ್ಲಿ 5-4 ಅಂತರದಿಂದ ಜಯ ಸಾಧಿಸಿದೆ.

ಈ ಮೂಲಕ ಕಿವೀಸ್ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರೆ, ಟೀಮ್ ಇಂಡಿಯಾ ಜರ್ನಿ ಅಂತ್ಯವಾಗಿದೆ.

ಆರಂಭದಲ್ಲಿ ಟೀಮ್ ಇಂಡಿಯಾ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಸುತ್ತಿನಲ್ಲೇ ಸತತವಾಗಿ ಗೋಲ್ ಬಲೆಯತ್ತ ಭಾರತೀಯ ಮುನ್ಪಡೆ ಆಟಗಾರರು ಮುನ್ನುಗ್ಗಿದರು. 2ನೇ ಸುತ್ತಿನ ಆರಂಭದಲ್ಲೇ ಕೌಂಟರ್ ಅಟ್ಯಾಕ್​ಗೆ ಮುಂದಾದ ಭಾರತೀಯ ಆಟಗಾರರು ಲಾಂಗ್ ಪಾಸ್​ಗಳ ಮೂಲಕ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. ಪಂದ್ಯದ 17ನೇ ನಿಮಿಷದಲ್ಲಿ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಆಕಾಶ್​ದೀಪ್ ಏಕಾಏಕಿ ಮುನ್ನುಗ್ಗಿದರು. ಬಲಭಾಗದಿಂದ ಮುನ್ನುಗ್ಗಿದ ಲಲಿತ್ ಕುಮಾರ್​ಗೆ ಚೆಂಡನ್ನು ನೀಡಿದರು. ಶೂಟರ್​ ಶಾಟ್ ಮೂಲಕ ಚೆಂಡನ್ನು ಗೋಲು ಪೋಸ್ಟ್​ ಒಳಗೆ ತಲುಪಿಸಿದರು.

ಪಂದ್ಯದ 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಸುಖಜೀತ್ ಯಶಸ್ವಿಯಾದರು. 2ನೇ ಸುತ್ತಿನಲ್ಲಿ 2-0 ಮುನ್ನಡೆಯೊಂದಿಗೆ ಆಟ ಮುಂದುವರೆಸಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ತಂಡದಿಂದ ಕೌಂಟರ್ ಅಟ್ಯಾಕ್ ಎದುರಾಯಿತು. ಪರಿಣಾಮ ಸ್ನ್ಯಾಪಿ ಪಾಸ್‌ಗಳ ಮೂಲಕ ಭಾರತೀಯ ಆಟಗಾರರನ್ನು ಚದುರಿಸಿದ ಕಿವೀಸ್ ಪಡೆ ಮೊದಲ ಗೋಲುಗಳಿಸಿತು. ಇದರೊಂದಿಗೆ 2ನೇ ಸುತ್ತಿನ ಮುಕ್ತಾಯದ ವೇಳೆ ಗೋಲುಗಳ ಅಂತರ 2-1 ಕ್ಕೆ ಇಳಿಯಿತು. ಮೂರನೇ ಹಂತದಲ್ಲೂ ಉಭಯ ತಂಡಗಳಿಂದಲೂ ರೋಚಕ ಪೈಪೋಟಿ ಕಂಡು ಬಂತು. 3ನೇ ಹಂತದ ಮುಕ್ತಾಯದ ವೇಳೆಗೆ ಭಾರತ 3-2 ಅಂತರವನ್ನು ಹೊಂದಿತ್ತು.
ಆದರೆ ನಾಲ್ಕನೇ ಹಂತದಲ್ಲಿ ನ್ಯೂಜಿಲೆಂಡ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. 50ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು. ಅದ್ಭುತ ಕೈಚಳಕ ತೋರಿಸುವ ಮೂಲಕ ಫೈಂಡ್ಲೇ ಅತ್ಯುತ್ತಮ ಗೋಲು ದಾಖಲಿಸಿದರು.

ಬಳಿಕ 2ನೇ ಸುತ್ತಿನ ಶೂಟೌಟ್​ನ ಮೊದಲ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಉಭಯ ತಂಡಗಳ ಆಟಗಾರರು ವಿಫಲರಾದರು. ಇನ್ನು 2ನೇ ಅವಕಾಶದಲ್ಲಿ ನ್ಯೂಜಿಲೆಂಡ್ ಪರ ಫೈಂಡ್ಲೆ ಗೋಲುಗಳಿಸಿದರೆ, ಟೀಮ್ ಇಂಡಿಯಾ ಪರ ರಾಜ್​ಕುಮಾರ್ ಗೋಲು ಬಾರಿಸಿದರು. ಹಾಗೆಯೇ 3ನೇಶೂಟೌಟ್ ಅನ್ನು ಗೋಲಾಗಿಸುವಲ್ಲಿ ಉಭಯ ತಂಡಗಳ ಆಟಗಾರರು ವಿಫಲರಾದರು. 4ನೇ ಅವಕಾಶವನ್ನು ಗೋಲಾಗಿಸಿ ಸ್ಯಾಮ್​ ಲೇನ್ 1-2 ಅಂತರ ಹೆಚ್ಚಿಸಿದರು. ಕೊನೆಯ ಅವಕಾಶದಲ್ಲಿ ಟೀಮ್ ಇಂಡಿಯಾಗೆ ಟೈ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಗೋಲಾಗಿಸುವಲ್ಲಿ ಶಂಶೇರ್ ವಿಫಲರಾದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು ಪೆನಾಲ್ಟಿ ಶೂಟೌಟ್​ನಲ್ಲಿ 5-4 ಅಂತರದಿಂದ ಗೆದ್ದು ಕ್ವಾರ್ಟರ್​ ಫೈನಲ್​ ಪ್ರವೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!