ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ-ಧಾರಚಾಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಡಿಯಾಗಿದೆ. ಹುಬ್ಬಳ್ಳಿ-ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ.
ರೆಡ್ ಅಲರ್ಟ್ ಘೋಷಣೆ ಹಾಗೂ ಜಿಲ್ಲೆಯ ಬಹುತೇಕ ಕಡೆ ನಿನ್ನೆ ಸಂಜೆಯಿಂದಲೇ ನಿರಂತರ ಮತ್ತು ವ್ಯಾಪಕ ಮಳೆ ಆಗುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
ನಿರಂತರ ಮಳೆ ಆಗುತ್ತಿರುವುದರಿಂದ ಅನೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಬುಧವಾರ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡೂ ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.