ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಂಬಾಳೆ ಫಿಲಂಸ್ ಹೊಸ ಚಿತ್ರವೊಂದನ್ನು ಘೋಷಿಸಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರೊಂದಿಗೆ ಸಿನಿಮಾ ಮಾಡಲು ಕನ್ನಡ ನೆಲದ ಸಂಸ್ಥೆ ಹೊಂಬಾಳೆ ಮುಂದಾಗಿದೆ.
ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಈಗ, ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿ, ದೇಶದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವ ಕನಸು ಕಂಡಿದೆ.
ಅಂದಹಾಗೆ, ಹೊಂಬಾಳೆ ಫಿಲಂಸ್ ಯಾವತ್ತೂ ಬಿಗ್ ಬಜೆಟ್ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಜೊತೆಗೆ, ಸಿನಿಮಾಗೆ ಕಥೆ ಆಯ್ಕೆ ಮಾಡಿಕೊಳ್ಳುವಲ್ಲಿ ಕೂಡ ಯಾವತ್ತೂ ಎಡವಿದ ಉದಾಹರಣೆ ಇಲ್ಲ. ಈ ಎಲ್ಲ ಕಾರಣಗಳಿಂದ, ಸದ್ಯ ಈ ಸಂಸ್ಥೆ ಕೈಗೆತ್ತಿಕೊಂಡಿರುವ ಹೊಸ ಪ್ರಾಜೆಕ್ಟ್ ಬಗ್ಗೆ ಗಣನೀಯ ಎನ್ನುವಷ್ಟು ನಿರೀಕ್ಷೆ ಮನೆಮಾಡಿದೆ.