ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸುವ ಯಾವುದೇ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ತನಿಖೆ ನಡೆಸಿದೆ. ಕೃತ್ಯಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿರುವ ನಡುವೆ ಇದನ್ನು ಎನ್‌ಐಎಗೆ ವಹಿಸುವ ಅಗತ್ಯ ಇಲ್ಲ ಎಂದರು.
ಬಂಧಿತರ ಇನ್ನಷ್ಟು ವಿಚಾರಣೆ ನಡೆಯುತ್ತಿದೆ. ಇದು ಪ್ರತೀಕಾರಕ್ಕೆ ನಡೆದಿದೆಯೇ, ಬೇರೆ ಯಾವುದಾದರೂ ಕಾರಣಕ್ಕೆ ನಡೆದಿದೆಯೇ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ತಿಳಿಯಬೇಕಿದೆ. ನಾವು ಊಹೆ ಮಾಡಿ ಇದೇ ಕಾರಣ ಅಂತ ಹೇಳಲು ಬರುವುದಿಲ್ಲ. ತನಿಖೆ ಮುಗಿಯೋವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.