ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆ.ಜಿ.ಹಳ್ಳಿ- ಡಿ.ಜೆ.ಹಳ್ಳಿ ಗಲಭೆಯಲ್ಲಿ ಪಾಲ್ಗೊಂಡವರು ‘ಅಮಾಯಕರು’ ಎಂದು ರಾಜ್ಯದ ಗೃಹ ಸಚಿವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ಆಗಸ್ಟ್ 11ರಂದು ರಾತ್ರಿ 9.30ರಿಂದ 12.30ರವರೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯ ಮೇಲೆ ನಡೆದ ದಾಳಿಯ ಘಟನೆಯನ್ನು ಎಲ್ಲ ಮಾಧ್ಯಮದವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟಾದರೂ ದೇಶದ ಎಲ್ಲರಿಗೆ ತಲುಪಿಸಿದ್ದರು. ಅಲ್ಲದೆ ಸಂತ್ರಸ್ತರ ನೆರವಿಗೆ ಧಾವಿಸಿದ್ದರು ಎಂದು ವಿವರಿಸಿದರು.
ಪೊಲೀಸ್ ವಾಹನಗಳನ್ನು ಸುಡಲಾಗಿತ್ತು. ಪೊಲೀಸ್ ಅಧಿಕಾರಿಗಳಿಗೆ ಹೊಡೆಯಲಾಯಿತು. ಅಮಾಯಕ ಜನರ ಮೇಲೆ ಹಲ್ಲೆ ಮಾಡಿದ್ದರು. ಅಂಥವರ ಬಗ್ಗೆ ‘ಸುಳ್ಳು ಮೊಕದ್ದಮೆಯಲ್ಲಿ ಬಂಧಿತರಾದ ಅಮಾಯಕ ಯುವಕರು ಮತ್ತು ವಿದ್ಯಾರ್ಥಿಗಳು ಎಂದು ಗೃಹ ಸಚಿವ ಡಾ. ಪರಮೇಶ್ವರ ಅವರು ತಿಳಿಸಿ ಮೊಕದ್ದಮೆ ವಾಪಸಾತಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ’ ಎಂದು ಟೀಕಿಸಿದರು.
ಕಾಂಗ್ರೆಸ್ಸಿನ ಶಾಸಕರಾದ ಅವರಿಗೆ ಯಾರೂ ಸಮಾಧಾನ ಹೇಳಿಲ್ಲ. ಅವರಿಗೆ ಟಿಕೆಟ್ ಕೊಡಲಿಲ್ಲ. ಇದೀಗ ಮೊಕದ್ದಮೆ ಹಿಂದಕ್ಕೆ ಪಡೆಯುವ ಮೂಲಕ ದಲಿತರಿಗೆ ಅನ್ಯಾಯ ಮಾಡಲು ಸಿದ್ದರಾಮಯ್ಯರ ಸರಕಾರ ಮುಂದಾಗಿದೆ ಎಂದು ನುಡಿದರು. ಇದು ಖಂಡನೀಯ; ಇಡೀ ರಾಜ್ಯದಲ್ಲಿ ಇದರ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ತನ್ವೀರ್ ಸೇಠ್‍ಗೆ ಯಾಕೆ ಕೆಟ್ಟ ಬುದ್ಧಿ?
ತನ್ವೀರ್ ಸೇಠ್ ಅವರ ನಡವಳಿಕೆ ಆಶ್ಚರ್ಯ ತಂದಿದೆ. ಅವರ ಮೇಲೆ ಎಸ್‍ಡಿಪಿಐ ದಾಳಿ, ಚೂರಿ ಹಾಕಿ ಕೊಲೆ ಮಾಡುವ ಯತ್ನ ನಡೆದಿತ್ತು. ಆಗ ಕಾಂಗ್ರೆಸ್ ನಾಯಕರು ನೆರವಿಗೆ ಬಂದಿರಲಿಲ್ಲ; ಆಸ್ಪತ್ರೆಗೆ ಕರೆದೊಯ್ಯಲು ಬರಲಿಲ್ಲ. ನಮ್ಮ ಸರಕಾರದ ಉಸ್ತುವಾರಿ ಸಚಿವರು ಅವರಿಗೆ ನೆರವಾಗಿ ಭದ್ರತೆ ಕೊಡಲಾಗಿತ್ತು ಎಂದು ನೆನಪಿಸಿದರು. ಅವರು ಆರು ತಿಂಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಅವರಿಗೆ ಯಾಕೆ ಈ ಕೆಟ್ಟ ಬುದ್ಧಿ ಬಂತು? ಕ್ರಿಮಿನಲ್‍ಗಳಿಗೆ ಅಮಾಯಕರೆಂದು ಸರ್ಟಿಫಿಕೇಟ್ ಕೊಡುವ ಪರಿಸ್ಥಿತಿ ಅವರಿಗೆ ಯಾಕೆ ಬಂತೋ ನನಗೆ ಗೊತ್ತಿಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ದೀನದಲಿತರಿಗೆ ಅನ್ಯಾಯ ಆಗುತ್ತಿದೆ. ಅವರು ಸುರಕ್ಷಿತರಾಗಿಲ್ಲ. ಅವರ ಅನುದಾನವನ್ನು ಕಾಂಗ್ರೆಸ್ಸಿನವರು ಬೇರೆ ಯೋಜನೆಗೆ ಬಳಸುತ್ತಿದ್ದಾರೆ ಎಂದು ದೂರಿದರು. ಬೇರೆ ಉದ್ದೇಶದ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲು ಅನುದಾನವನ್ನು ಶಿಕ್ಷಣ, ಉದ್ಯೋಗ, ಭೂಮಿ ನೀಡಿಕೆ, ನೀರಾವರಿ ಸೌಲಭ್ಯ, ಹಾಸ್ಟೆಲ್ ನಿರ್ಮಾಣ, ವಸತಿ ಶಾಲೆ ನಿರ್ಮಿಸಲು ಖರ್ಚು ಮಾಡಬೇಕೇ ಹೊರತು ಇವರು ವೋಟ್‍ಬ್ಯಾಂಕ್ ರಾಜಕಾರಣಕ್ಕಾಗಿ ಗ್ಯಾರಂಟಿಗೆ ಬಳಸುವುದನ್ನು ಖಂಡಿಸುತ್ತೇನೆ. ಇದು ಕಾನೂನು ದೃಷ್ಟಿಯಿಂದ ಅಪರಾಧ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಾವು ನಿರ್ಮಿಸುತ್ತಿದ್ದ 156 ಹಾಸ್ಟೆಲ್‍ಗಳು ಅರ್ಧಕ್ಕೇ ನಿಂತಿವೆ. 75 ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಅರ್ಧಕ್ಕೇ ನಿಲ್ಲಿಸಿದ್ದಾರೆ. 3 ತಿಂಗಳಿಂದ ಕೆಲಸ ಬಂದ್ ಆಗಿದೆ. ಹಾಸ್ಟೆಲ್ ನಿರ್ಮಾಣ, ವಸತಿ ಶಾಲೆಗೆ 2,500 ಕೋಟಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲು ಅವರು ಆಗ್ರಹಿಸಿದರು.
30 ಶಾಸಕರು ಸಹಿ ಮಾಡಿದ ಪತ್ರಕ್ಕೆ ಸಂಬಂಧಿಸಿ ಬಿ.ಆರ್.ಪಾಟೀಲರಂಥ ಹಿರಿಯ ರಾಜಕಾರಣಿ ಯು ಟರ್ನ್ ಹೊಡೆದು ನನ್ನದಲ್ಲ ಅದು ಫೇಕ್ ಎಂದು ತಿಳಿಸಿದ್ದಾರೆ. ಆದರೆ, ಸಹಿ ಮಾಡಿದ ಹಲವರು ಅನ್ಯಾಯ ಆದುದರಿಂದ ಸಹಿ ಮಾಡಿದ್ದಾಗಿ ಹೇಳುತ್ತಾರೆ. ಕ್ಷೇತ್ರಕ್ಕೆ ಅನ್ಯಾಯ ಆಗಿದೆ; ಕೆಲಸ ಕಾರ್ಯಗಳು ಅರ್ಧಕ್ಕೇ ನಿಂತಿವೆ ಎಂದು ಹೇಳುತ್ತಿದ್ದಾರೆ. ವರ್ಗಾವಣೆಯಲ್ಲಿ ಮಧ್ಯವರ್ತಿಗಳ ಮೂಲಕ ಲಂಚ ಕೇಳುವ ಕುರಿತು ಅವರೇ ಆರೋಪ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಶೇ 58 ಲಂಚದ ಸರಕಾರ
ಇವರದು ನಮ್ಮ ಮೇಲೆ ಶೇ 40 ರ ಸುಳ್ಳು ಆರೋಪ ಇತ್ತು. ಅದು ಆಧಾರರಹಿತವಾಗಿತ್ತು. ಕೆಂಪಣ್ಣನ ಹಳೆಯ ಲೆಟರ್‍ಪ್ಯಾಡ್ ಬಳಸಿ ಪತ್ರ ಬರೆದು ಮೋಸ ಮಾಡಿದ್ದರು. ಇವತ್ತು ಶೇ 58 ಲಂಚ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು. ರಾಜ್ಯದಲ್ಲಿ ಅನುಷ್ಠಾನ ಹಂತದ ಕಾಮಗಾರಿ ಸ್ಥಗಿತಗೊಳಿಸಿ ಲಂಚ ಕೇಳುವ ಲಜ್ಜೆಗೆಟ್ಟ ಆಡಳಿತ ಇದೆ ಎಂದು ಟೀಕಿಸಿದರು.
ಶಿವಮೊಗ್ಗದ ಹರ್ಷ ಹತ್ಯೆ, ಸುಳ್ಯ ಸಮೀಪದ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನೂ ಅಮಾಯಕರು ಎನ್ನುತ್ತಾರೆ. ಕಾಂಗ್ರೆಸ್ಸಿನ ದೃಷ್ಟಿಯಲ್ಲಿ ಯಾರು ಅಮಾಯಕರಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ನುಡಿದರು.
ಉಡುಪಿಯಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಚಿತ್ರಣ ವಿಚಾರದಲ್ಲಿ ಪೊಲೀಸರಿಂದ ಸುಳ್ಳು ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮಹಿಳಾ ಆಯೋಗದವರಿಗೂ ತಪ್ಪು ಮಾಹಿತಿ ಕೊಟ್ಟು ಹೇಳಿಕೆ ಕೊಡಿಸಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.