ಸಾಮಾನ್ಯವಾಗಿ ಬಾಯಲ್ಲಿ ಹುಣ್ಣಾದಾಗ ತೀವ್ರವಾದ ನೋವುಂಟಾಗುತ್ತದೆ. ಊಟ ಮಾಡಲು, ನೀರು ಕುಡಿಯಲು ಕೂಡ ಕಷ್ಟವಾಗುತ್ತದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ, ಜ್ವರ ಬಂದಾಗ ಅಥವಾ ಹೆಚ್ಚು ಖಾರ ಇರುವ ಆಹಾರ ಸೇವಿಸಿದಾಗ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಸಾಮಾನ್ಯ. ಇವು ನೋವಿನ ಜೊತೆಗೆ ಕೆಂಪಾಗುವುದು, ಬಿಳಿ ಕೀವು ತುಂಬಿಕೊಳ್ಳುವುದು ಮತ್ತು ಊತ ಉಂಟುಮಾಡುತ್ತವೆ. ಆದರೆ ಇಂತಹ ಸಂದರ್ಭಗಳಲ್ಲಿ ಕೆಲವು ಮನೆಮದ್ದುಗಳು ತ್ವರಿತ ಶಮನ ನೀಡುತ್ತವೆ.
ತೆಂಗಿನೆಣ್ಣೆ ಹಚ್ಚುವುದು: ಹುಣ್ಣಾಗಿರುವ ಜಾಗಕ್ಕೆ ತೆಂಗಿನೆಣ್ಣೆ ಹಚ್ಚಿದರೆ ತಂಪು ಸಿಗುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
ಟೀ ಬ್ಯಾಗ್ ಬಳಕೆ: ಉಗುರು ಬೆಚ್ಚಗಿನ ಟೀ ಬ್ಯಾಗ್ ಅನ್ನು ಬಾಯಲ್ಲಿ ಹುಣ್ಣಿನ ಮೇಲೆ ಇಡುವುದರಿಂದ ನೋವು ಶಮನವಾಗುತ್ತದೆ.
ಮೊಸರನ್ನ ಸೇವನೆ: ಬಾಯಲ್ಲಿ ಹುಣ್ಣಿದ್ದಾಗ ಮೊಸರನ್ನ ತಿಂದರೆ ಹೊಟ್ಟೆ ತಣ್ಣಗಾಗುತ್ತದೆ ಮತ್ತು ಹುಣ್ಣು ಬೇಗ ಗುಣವಾಗುತ್ತದೆ.
ಲವಂಗ ಬಳಕೆ: ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಅದರ ರಸವನ್ನು ಹುಣ್ಣಿನ ಮೇಲೆ ಬೀಳಲು ಬಿಡುವುದರಿಂದ ಶೀಘ್ರ ಶಮನ ದೊರೆಯುತ್ತದೆ.
ದ್ರವ ಆಹಾರ ಸೇವನೆ: ಮಜ್ಜಿಗೆ, ಎಳನೀರು, ಕಲ್ಲಂಗಡಿ ಜ್ಯೂಸ್ ಮುಂತಾದ ತಂಪು ಪಾನೀಯಗಳನ್ನು ಸೇವಿಸುವುದರಿಂದ ದೇಹ ನಿರ್ಜಲೀಕರಣದಿಂದ ತಪ್ಪುತ್ತದೆ ಮತ್ತು ಹುಣ್ಣಿಗೆ ಆರೈಕೆ ದೊರೆಯುತ್ತದೆ.