ಮಸುಕಾದ ಅಥವಾ ಹಳದಿ ಬಣ್ಣದ ಹಲ್ಲುಗಳಿಂದಾಗಿ ಮುಕ್ತವಾಗಿ ನಗಲು ನಿಮಗೆ ಮುಜುಗರ ಆಗುತ್ತಿದ್ಯಾ. ಇದರಿಂದ ಬಾಯಿಯ ಆರೋಗ್ಯ ಸರಿಯಾಗಿಲ್ಲವೆಂಬ ಶಂಕೆಯೂ ಇತರರಲ್ಲಿ ಉಂಟಾಗಬಹುದು. ಹೀಗಾಗಿ ಹಲ್ಲು ಬಿಳುಪಾಗಿಡಲು ಹಲವು ಕ್ರೀಮ್‌ಗಳು, ಕಿಟ್‌ಗಳು ಬಳಕೆ ಮಾಡುತ್ತಿರುವವರೇ ಹೆಚ್ಚು. ಆದರೆ ಆಯುರ್ವೇದ ತಜ್ಞರು ಪ್ರಕಾರ, ಈ ಸಮಸ್ಯೆಗೆ ಮನೆಯಲ್ಲಿಯೇ ಇರುವ ಅರಿಶಿನದಿಂದ ಪರಿಹಾರ ಸಾಧ್ಯವಿದೆ.
ಅರಿಶಿನದಲ್ಲಿ ಇರುವ ಕರ್ಕ್ಯುಮಿನ್ ಎನ್ನುವ ಅಂಶ ಬ್ಯಾಕ್ಟೀರಿಯಾ ನಾಶಕ ಮತ್ತು ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದು ಹಲ್ಲುಗಳ ಮೇಲೆ ಸಂಚಯವಾಗುವ ಪ್ಲೇಕ್, ಕಲೆ ಮತ್ತು ಸೋಂಕುಗಳನ್ನು ಕಡಿಮೆ ಮಾಡುತ್ತದೆ.
ಅರಿಶಿನ ಪೇಸ್ಟ್ ಬಳಸಿ ಹಲ್ಲು ಕ್ಲೀನಿಂಗ್
1/2 ಟೀಚಮಚ ಅರಿಶಿನ ಪುಡಿಗೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್ ಅನ್ನು ಬ್ರಷ್‌ನಲ್ಲಿ ಹಾಕಿ 2 ನಿಮಿಷಗಳ ಕಾಲ ನಿಧಾನವಾಗಿ ಹಲ್ಲುಜ್ಜಬೇಕು. ಬಳಿಕ ಸರಿಯಾಗಿ ಬಾಯಿಯನ್ನು ತೊಳೆಯಬೇಕು. ತಜ್ಞರು ವಾರಕ್ಕೆ 2–3 ಬಾರಿ ಇದನ್ನು ಮಾಡುವುದು ಪರಿಣಾಮಕಾರಿಯೆಂದು ತಿಳಿಸಿದ್ದಾರೆ. ಕೆಲವು ವಾರಗಳಲ್ಲಿ ಹಲ್ಲುಗಳಲ್ಲಿ ಬಿಳುಪಾಗುತ್ತಿರುವ ವ್ಯತ್ಯಾಸ ಸ್ಪಷ್ಟವಾಗಲಿದೆ.
ಅರಿಶಿನ ಹಾಗೂ ತೆಂಗಿನ ಎಣ್ಣೆ ಮಿಶ್ರಣ
1 ಟೀಚಮಚ ತೆಂಗಿನ ಎಣ್ಣೆಗೆ 1/2 ಟೀಚಮಚ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಬಾಯಿಯಲ್ಲಿ ಮೌತ್‌ವಾಶ್‌ನಂತೆ 5-10 ನಿಮಿಷಗಳ ಕಾಲ ಮುಕ್ಕಳಿಸಬೇಕು. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ತೊಳೆಯಬೇಕು. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಬ್ಯಾಕ್ಟೀರಿಯಾದ ತಾತ್ಕಾಲಿಕ ಶುದ್ಧೀಕರಣವನ್ನೂ ನೀಡುತ್ತದೆ. ಜೊತೆಗೆ ದುರ್ವಾಸನೆ, ಉರಿಯೂತಗಳೂ ಕಡಿಮೆಯಾಗುತ್ತವೆ.
ಅರಿಶಿನ ಬಳಸಿ ಮಾಡುವ ಈ ನೈಸರ್ಗಿಕ ಪ್ರಯೋಗಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಣಾಮಕಾರಿಯೂ ಹೌದು. ಹೀಗಾಗಿ ದುಬಾರಿ ಟ್ರೀಟ್‌ಮೆಂಟ್‌ಗಳ ಬದಲು ಮನೆಯಲ್ಲೇ ಪ್ರಯತ್ನಿಸಿ, ಹಲ್ಲುಗಳ ಬಿಳುಪು ಮತ್ತೊಮ್ಮೆ ಕಾಪಾಡಿಕೊಳ್ಳಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)