ಹೊಸದಿಗಂತ ವರದಿ,ಶಿವಮೊಗ್ಗ:
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಗಳನ್ನು ಕುಂಸಿ ಠಾಣೆ ಪೊಲೀಸರು ಶನಿವಾರ ಸನ್ಮಾನಿಸಿ ಗೌರವಿಸಿದರು.
ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ತಾಲ್ಲೂಕಿನ ಚೋರಡಿ ಗ್ರಾಮದ ಸೋಮಶೇಖರ್ ಮತ್ತು ಸುಹಾಸ್ ಪ್ರಸಾದ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಚೋರಡಿ ಗ್ರಾಮದ ಸೋಮಶೇಖರ್ ಅವರಿಗೆ ಗ್ರಾಮದ ರಂಗಮಂದಿರ ರಸ್ತೆಯಲ್ಲಿ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿತ್ತು. ಅದರಲ್ಲಿ ಐಡಿ ಕಾರ್ಡ್, 1 ಲಕ್ಷ ಹಣ, ಬ್ಯಾಂಕ್ ಪಾಸ್ ಪುಸ್ತಕ., ಎಟಿಎಂ ಕಾರ್ಡ್ ಹಾಗೂ ಶಾಲೆ ದಾಖಲಾತಿಗಳು ದೊರೆತಿದ್ದವು. ಇವುಗಳನ್ನು ಸಂಬಂಧಪಟ್ಟ ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಲ್ ರೇಣುಕಾ ಅವರಿಗೆ ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.
ಅದೇ ರೀತಿ ಸುಹಾಸ್ ಪ್ರಸಾದ್ ಸಿ ಚೋರಡಿ ಗ್ರಾಮದ ಎನ್ ಹೆಚ್ 69 ರಸ್ತೆಯಲ್ಲಿ ಸಿಕ್ಕಿದ್ದ ಪರ್ಸನಲ್ಲಿ ಇದ್ದಂತ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅದರ ಮಾಲೀಕರಾದ ನಿವೃತ್ತ ಐಜಿಪಿ ಸುರೇಶ್ ಬಾಬುರವರ ಮಗಳಾದ ಶಶಿ ಶಾಲಿನಿ ಅವರಿಗೆ ವಾಪಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.