ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಯುವಕ ಮತ್ತು ಯುವತಿಯನ್ನು ಬರ್ಬರವಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಅವರಿಬ್ಬರೂ ತಮ್ಮ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಇದರಿಂದಾಗಿ ದಂಪತಿನ್ನು ಬರ್ಬರವಾಗಿ ಮರ್ಯಾದಾ ಹತ್ಯೆ ಮಾಡಲಾಗಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಈದ್-ಉಲ್-ಅಝ್ಹಾ ಹಬ್ಬದ ಮೂರು ದಿನಗಳ ಮೊದಲು ನಡೆದಿದೆ.
ಬಾನೋ ಬಿಬಿ ಮತ್ತು ಅಹ್ಸಾನ್ ಉಲ್ಲಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಬಾನೋ ಬಿಬಿಯ ಕುಟುಂಬಕ್ಕೆ ಈ ಮದುವೆ ಸ್ವಲ್ಪವೂ ಇಷ್ಟವಿರಲಿಲ್ಲ. ಅವರು ಆತನೊಂದಿಗಿನ ಆಕೆಯ ಮದುವೆಯನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ, ಯಾರಿಗೂ ಹೆದರದ ಆಕೆ ಮದುವೆಯಾಗೆ ಬಿಟ್ಟಿದ್ದಳು. ಇದರಿಂದ ಸಿಟ್ಟಾಗಿದ್ದ ಕುಟುಂಬವೂ ಆಕೆಯನ್ನು ಗುಂಡೇಟಿನಿಂದ ಕೊಂದು ಹಾಕಿ ಸಂಭ್ರಮಿಸಿರುವ ವಿಡಿಯೋ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿ ಬಾನೋ ಬಿಬಿ, ಕೊಲೆಗಾರರ ಮುಂದೆ ತನ್ನ ಮದುವೆ ಕಾನೂನುಬದ್ಧ ಎಂದು ಹೇಳಿದ್ದಾಳೆ. ಕೆಲವು ಗಂಡಸರು ನವ ದಂಪತಿಗಳನ್ನು ವಾಹನಗಳಿಂದ ಮರುಭೂಮಿಯ ಪ್ರದೇಶಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಕೊಲ್ಲುತ್ತಾರೆ. ಮಹಿಳೆಯ ತಲೆಗೆ ಶಾಲು ಹೊದಿಸಿದ್ದಾರೆ ಜೊತೆಗೆ ಕುರಾನ್ ಹಿಡಿದ್ದಾರೆ. ಆಕೆ ಒಬ್ಬ ಪುರುಷನ ಮುಂದೆ ನಡೆಯುತ್ತಿರುತ್ತಾಳೆ. ಸುತ್ತಲೂ ಜನ ಗುಂಪು ಸೇರಿ ನೋಡುತ್ತಿರುತ್ತಾರೆ. ಬ್ರಾಹ್ವಿ ಭಾಷೆಯಲ್ಲಿ ʻನೀವು ನನ್ನ ಮೇಲೆ ಮಾತ್ರ ಗುಂಡು ಹಾರಿಸಲು ಅನುಮತಿ ಇದೆ, ಬೇರೆ ಏನೂ ಇಲ್ಲ.” ಎಂದು ಆಕೆ ಹೇಳುತ್ತಲೇ ಮೂರು ಬಾರಿ ಗುಂಡು ಹಾರಿಸುತ್ತಾರೆ. ನಂತರ ಆತ ಆಕೆಯ ಗಂಡನನ್ನು ಕೊಲ್ಲುತ್ತಾನೆ. ಇನ್ನೊಬ್ಬ ವ್ಯಕ್ತಿ ಗನ್ ತೆಗೆದುಕೊಂಡು ಗುಂಡು ಹಾರಿಸುತ್ತಾನೆ. ಇಬ್ಬರೂ ರಕ್ತಸಿಕ್ತವಾಗಿ ನೆಲದ ಮೇಲೆ ಬಿದ್ದಿರುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಬಾನೋ ತನ್ನ ಸಹೋದರನ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾಳೆ ಎಂದು ಆಕೆಯ ಸಹೋದರ ದೂರು ನೀಡಿದ್ದನು. ಹೀಗಾಗಿ, ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಆ ಬುಡಕಟ್ಟು ಮುಖಂಡ ಮತ್ತು ಮಹಿಳೆಯ ಸಹೋದರ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಕ್ವೆಟ್ಟಾದ ಹನ್ನಾ-ಉರಾಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ನವೀದ್ ಅಖ್ತರ್ ದೂರು ದಾಖಲಿಸಿದ್ದಾರೆ.