ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್

ಹೊಸದಿಗಂತ ವರದಿ, ಮೈಸೂರು:

ಮೈಸೂರು ವಿಶ್ವವಿದ್ಯಾಲಯದ ೧೦೪ನೇ ಘಟಿಕೋತ್ಸವ ಮಾ.೩ರಂದು ನಡೆಯಲಿದ್ದು, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಹಾಗೂ , ೩೨,೨೪೯ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಶುಕ್ರವಾರ ವಿವಿಯ ಕ್ರಾರ್ಫರ್ಡ್ ಭವನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಕ್ರಾಫರ್ಡ್ ಭವನದಲ್ಲಿ ಘಟಿಕೋತ್ಸವ ನಡೆಯಲಿದ್ದು, ಮೈಸೂರು ವಿಶ್ವವಿದ್ಯಾಲಯದ ೧೦೪ನೇ ಘಟಿಕೋತ್ಸವದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸುದರ್ಶನ ನರಸಿಂಹ ಕ್ಷೇತ್ರದ ಪೀಠಾದಿಪತಿ ಪ್ರೊ.ಭಾಷ್ಯಂ ಸ್ವಾಮೀಜಿ, ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್.ಸೀತಾರಾಮ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಹೇಳಿದರು.

ಎಸ್.ಎಂ.ಕೃಷ್ಣ ೧೯೯೯ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಭಾಷ್ಯಂ ಸ್ವಾಮೀಜಿ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದರ್ಶನ ಕ್ಷೇತ್ರದ ಪೀಠಾಧಿಪತಿಯಾಗಿ ಸುದರ್ಶನ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಂ.ಆರ್.ಸೀತಾರಾಮ್ ಅವರು, ೨೦೧೨ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡು ಕಾಂಗ್ರೆಸ್ ಸರ್ಕಾರದಲ್ಲಿ ಯೋಜನೆ, ಅಂಕಿಅoಶ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂ.ಎಸ್.ರಾಮಯ್ಯ ಪಾಲಿಟೆಕ್ನಿಕ್ ಮತ್ತು ಎಂ.ಎಸ್.ರಾಮಯ್ಯ ಹಾಸ್ಟೆಲ್‌ಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಹಿಸುವರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು ಎಂದು ತಿಳಿಸಿದರು.

ನಿರ್ವಹಣೆಯೇ ಸವಾಲು: ಮೈಸೂರು ವಿಶ್ವವಿದ್ಯಾಲಯ ವಿಭಜನೆಯಾಗಿದ್ದರೂ ಈ ಬಾರಿಯ ಘಟಿಕೋತ್ಸವದಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲಿದ್ದಾರೆ. ವಿಭಜನೆಗೆ ಮುನ್ನ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ೨೩೬ ಕಾಲೇಜುಗಳು ಇದ್ದವು. ಪ್ರಸ್ತುತ ೧೧೧ ಇವೆ. ಮೈಸೂರು ಜಿಲ್ಲೆಯ ವ್ಯಾಪ್ತಿಯಷ್ಟೆ ಈಗ ಇದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ನಿರ್ವಹಣೆಯೇ ಸವಾಲಾಗಿದೆ ಎಂದು ಹೇಳಿದರು.

ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ವಿಶ್ವವಿದ್ಯಾನಿಲಯಕ್ಕೆ ೬೬೪ ಬೋಧಕರ ಹುದ್ದೆಗಳು ಮಂಜೂರಾಗಿವೆ. ಆದರೆ, ನಮಲ್ಲಿ ಪ್ರಸ್ತುತ ಇರುವುದು ೨೯೦ ಮಂದಿ ಮಾತ್ರ. ನಿವೃತ್ತಿಯಾದವರ ಸ್ಥಾನಕ್ಕೂ ಭರ್ತಿಯಾಗಿಲ್ಲ. ೧,೩೪೯ ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ೫೦೦ಕ್ಕೂ ಕಡಿಮೆ ಸಿಬ್ಬಂದಿ ಇದ್ದಾರೆ. ೮೫೦ ಮಂದಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಬೋಧನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!