ಹೊಸದಿಗಂತ ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಂತಿರುವ ಅಂಕೋಲೆಯ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ದೀನಬಂಧು ಸ.ಪ.ಗಾಂವಕರ ದತ್ತಿನಿಧಿ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಅವರಿಗೆ ಪ್ರದಾನ ಮಾಡಲಾಯಿತು.
ಪಟ್ಟಣದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನಿವೃತ್ತ ಎ.ಡಿ.ಜಿ.ಪಿ ಜೀವನಕುಮಾರ ಗಾಂವಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಂತಾರಾಮ ನಾಯಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಶಾಂತಾರಾಮ ನಾಯಕ ಅವರ ಸಾಹಿತ್ಯಿಕ ಕೊಡುಗೆ ಮತ್ತು ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಗೌರವಾಧ್ಯಕ್ಷ ಹಾಗೂ ದತ್ತಿನಿಧಿ ಸಮಿತಿಯ ಅಧ್ಯಕ್ಷರಾದ ಕೆ.ವಿ.ನಾಯಕ ವಹಿಸಿದ್ದರು. ವೇದಿಕೆಯ ಮೇಲೆ ಕರ್ನಾಟಕ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಗುಂದಿ, ಕಾರ್ಯದರ್ಶಿ ಶ್ರೀಧರ ನಾಯಕ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಾಹಿತ್ಯಿಕ ಸಂಭ್ರಮಕ್ಕೆ ತಾಲ್ಲೂಕಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳು, ಕನ್ನಡಾಭಿಮಾನಿಗಳು ಸಾಕ್ಷಿಯಾದರು. ಕರ್ನಾಟಕ ಸಂಘದ ಈ ನಡೆಯು ಸ್ಥಳೀಯ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಚೈತನ್ಯ ನೀಡಿದಂತಿದೆ.

